ಸೂರತ್ (ಗುಜರಾತ್):ಕಂದಾಯ ಗುಪ್ತಚರ ನಿರ್ದೇಶನಾಲಯವು ಗುಜರಾತ್ನ ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಾರ್ಜಾದಿಂದ ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರಿಂದ 25 ಕೋಟಿ ರೂಪಾಯಿ ಮೌಲ್ಯದ 48.2 ಕೆಜಿ ಚಿನ್ನದ ಪೇಸ್ಟ್ ಅನ್ನು ವಶಪಡಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಕಳ್ಳಸಾಗಣೆಗೆ ಕಡಿವಾಣ ಹಾಕಲಾಗುತ್ತಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ.
"ನಿರ್ದಿಷ್ಟ ಮಾಹಿತಿ ಆಧಾರದ ಮೇಲೆ DRI ಅಧಿಕಾರಿಗಳು ಸೂರತ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜುಲೈ 7 ರಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಮೂಲಕ ಶಾರ್ಜಾದಿಂದ ಇಲ್ಲಿಗೆ ಆಗಮಿಸಿದ ಮೂವರು ಪ್ರಯಾಣಿಕರನ್ನು ತಡೆದು ಪರಿಶೀಲಿಸಿದಾಗ ಪೇಸ್ಟ್ ರೂಪದಲ್ಲಿ ಸಾಗಿಸುತ್ತಿದ್ದ ಚಿನ್ನ ಪತ್ತೆಯಾಗಿದೆ. ಬ್ಯಾಗೇಜ್ನ ಒಳಗೆ 20 ಬಿಳಿ ಬಣ್ಣದ ಪ್ಯಾಕೆಟ್ಗಳಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಬಚ್ಚಿಡಲಾಗಿತ್ತು. ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾದ ಅಧಿಕಾರಿಗಳ ಸಹಾಯದಿಂದ ಕಳ್ಳಸಾಗಣೆ ಮಾಡುತ್ತಿದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಹೇಳಿದೆ.
ಪ್ರಯಾಣಿಕರಿಂದ ವಶಪಡಿಸಿಕೊಂಡ ಒಟ್ಟು 48.20 ಕೆಜಿ ಚಿನ್ನದ ಪೇಸ್ಟ್ 25.26 ಕೋಟಿ ಮೌಲ್ಯದ್ದಾಗಿದೆ ಎಂದು ಅಂದಾಜಿಲಾಗಿದೆ. ಕಸ್ಟಮ್ಸ್ ಆಕ್ಟ್ 1962 ರ ಅಡಿಯಲ್ಲಿ ಮೂವರು ಪ್ರಯಾಣಿಕರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಯಾಣಿಕರು ಮತ್ತು ಓರ್ವ ಅಧಿಕಾರಿಯನ್ನು ಬಂಧಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.