ಆಗ್ರಾ (ಉತ್ತರ ಪ್ರದೇಶ): ಹಿರಿಯ ಸೇನಾಧಿಕಾರಿಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ಗಂಭೀರ ಸ್ವರೂಪದ ಪ್ರಕರಣದಲ್ಲಿ ಭಾರತೀಯ ಸೇನೆಯ ಕಮಾಂಡರ್ವೊಬ್ಬರಿಗೆ ಉತ್ತರ ಪ್ರದೇಶದ ಆಗ್ರಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ಆದೇಶ ಹೊರಡಿಸಿತು. ಅಪರಾಧಿಗೆ ಒಂದು ಲಕ್ಷ ರೂಪಾಯಿ ದಂಡವನ್ನೂ ಹಾಕಿರುವ ಕೋರ್ಟ್, ''ಇದೊಂದು ಸಾಮಾನ್ಯ ಅತ್ಯಾಚಾರ ಪ್ರಕರಣವಲ್ಲ'' ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.
ಹತ್ತು ವರ್ಷಗಳ ಹಿಂದೆ ನಡೆದ ಪ್ರಕರಣವಿದು. ಮಣಿಪುರದ ತೌಬಲ್ ಮೂಲದ ಸೇನಾ ಕಮಾಂಡರ್ ಎನ್. ಘನಶ್ಯಾಮ್ ಪೋಕ್ಸೋ ಕಾಯ್ದೆಯಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ವಿಶೇಷ ನ್ಯಾಯಾಲಯದ (ಪೋಕ್ಸೋ ಕಾಯ್ದೆ) ನ್ಯಾ. ಪ್ರಮೇಂದ್ರ ಕುಮಾರ್ ಗುರುವಾರ ತೀರ್ಪು ಪ್ರಕಟಿಸಿದ್ದಾರೆ. ''32 ವರ್ಷದ ಮತ್ತು ಈಗಾಗಲೇ ಮದುವೆಯಾಗಿರುವ ವ್ಯಕ್ತಿ, 11 ವರ್ಷದ ಬಾಲಕಿ ಮೇಲೆ ಅಪರಾಧ ಎಸಗಿದ್ದಾನೆ. ಆರೋಪಿ ಸಶಸ್ತ್ರ ಪಡೆಯಲ್ಲಿದ್ದು, ಸಂತ್ರಸ್ತೆ ಎಷ್ಟೊಂದು ಭಯಗೊಂಡಿದ್ದಳು ಎಂದರೆ, ಆರೋಪಿಯ ಕೃತ್ಯವನ್ನು ಪೋಷಕರಿಗೆ ತಿಳಿಸಲು ಆಕೆಗೆ ಏಳು ವರ್ಷಗಳಿಗೂ ಹೆಚ್ಚು ಸಮಯ ಬೇಕಾಯಿತು. ಇದು ಸಾಮಾನ್ಯ ಅತ್ಯಾಚಾರ ಅಪರಾಧವಲ್ಲ'' ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಕರಣದ ಸಂಪೂರ್ಣ ವಿವರ: 2013ರಲ್ಲಿ ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿಯೊಬ್ಬರ ಕುಟುಂಬ ಆಗ್ರಾದಲ್ಲಿ ನೆಲೆಸಿತ್ತು. ಈ ಅಧಿಕಾರಿಗೆ ಅಪ್ರಾಪ್ತ ಮಗಳಿದ್ದಳು. ಸೇನೆಯಲ್ಲೇ ಕಮಾಂಡರ್ ಆಗಿದ್ದ ಘನಶ್ಯಾಮ್, ಹಿರಿಯ ಅಧಿಕಾರಿ ನಿವಾಸಕ್ಕೆ ಬರುತ್ತಿದ್ದ. 2013ರ ಫೆಬ್ರವರಿಯಲ್ಲಿ ಒಂದು ದಿನ ಅಧಿಕಾರಿಯ ಮಗಳನ್ನು ಮನೆಯಲ್ಲಿ ಒಬ್ಬಂಟಿಯಾಗಿದ್ದಳು. ಇದನ್ನು ಗಮನಿಸಿದ್ದ ಆತ, ಅತ್ಯಾಚಾರವೆಸಗಿದ್ದ. ಕೃತ್ಯದ ವಿಡಿಯೋ ಚಿತ್ರೀಕರಣ ಕೂಡ ಮಾಡಿಕೊಂಡಿದ್ದ. ಹೀಗಾಗಿಯೇ ಸಂತ್ರಸ್ತೆ ಆತಂಕದಿಂದ ಯಾರಿಗೂ ವಿಷಯ ತಿಳಿಸಿರಲಿಲ್ಲ. ಇದರ ನಡುವೆ ಸಂತ್ರಸ್ತೆಯ ತಂದೆಯನ್ನು ಆಗ್ರಾದಿಂದ ಮಧ್ಯಪ್ರದೇಶದ ಭೋಪಾಲ್‌ಗೆ ವರ್ಗಾವಣೆ ಮಾಡಲಾಗಿತ್ತು. ಇದಾದ ಬಳಿಕ ಆರೋಪಿ ಕಮಾಂಡರ್ ಅಲ್ಲಿಗೂ ತಲುಪಿ ಬಾಲಕಿ ಮೇಲೆ ತನ್ನ ದುಷ್ಕೃತ್ಯ ಎಸಗಿದ್ದಾನೆ. ಅಲ್ಲದೇ, ಅಶ್ಲೀಲ ವಿಡಿಯೋಗಳನ್ನಿಟ್ಟುಕೊಂಡು ಬೆದರಿಕೆ ಹಾಕುತ್ತಿದ್ದ. ಆದ್ದರಿಂದ ನೊಂದ ಬಾಲಕಿ ಆರು ವರ್ಷಗಳ ಕಾಲ ಮೌನವಾಗಿಯೇ ಸಹಿಸಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.