ನವದೆಹಲಿ:ನಗರದಲ್ಲಿ ಹಾಡಹಗಲೇ ದೋಚಿದ ಘಟನೆ 2 ದಿನಗಳ ಹಿಂದೆ ನಡೆದಿದೆ. ಕಾರಿನಲ್ಲಿ ತೆರಳುತ್ತಿದ್ದ ಉದ್ಯಮಿಯನ್ನು ಬೈಕ್ನಲ್ಲಿ ಬಂದ ನಾಲ್ವರು ಅಡ್ಡಗಟ್ಟಿ ಬಂದೂಕು ತೋರಿಸಿ 2 ಲಕ್ಷ ರೂಪಾಯಿ ನಗದು ಇದ್ದ ಬ್ಯಾಗ್ ಅನ್ನು ತೆಗೆದುಕೊಂಡು ಹೋಗಿದ್ದಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಶನಿವಾರ ಮಧ್ಯಾಹ್ನ ಪ್ರಗತಿ ಮೈದಾನದ ಸುರಂಗ ಮಾರ್ಗದಲ್ಲಿ ದುಷ್ಕರ್ಮಿಗಳು ಉದ್ಯಮಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ರಸ್ತೆ ಮಧ್ಯೆಯೇ ಕಾರು ಅಡ್ಡಗಟ್ಟಿ ಬಂದೂಕು ತೋರಿಸಿ ಉದ್ಯಮಿ ಬಳಿಯಿದ್ದ ಹಣದ ಬ್ಯಾಗ್ ಅನ್ನು ದೋಚಿದ್ದಾರೆ. ಅಲ್ಲದೇ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಗುಜರಾತ್‌ನ ಮೆಹ್ಸಾನಾ ನಿವಾಸಿಯಾಗಿರುವ ಸಜನ್ ಕುಮಾರ್ ನಷ್ಟಕ್ಕೊಳಗಾದವರು. ಇವರು ಚಾಂದಿನಿ ಚೌಕ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಅಂಗಡಿಯನ್ನು ಹೊಂದಿದ್ದಾರೆ. ಶನಿವಾರ ಮಧ್ಯಾಹ್ನ ಗುರುಗ್ರಾಮ ಮೂಲದ ಸಂಸ್ಥೆಗೆ 2 ಲಕ್ಷ ರೂ. ಕಟ್ಟಲು ಇನ್ನೊಬ್ಬ ವ್ಯಕ್ತಿಯ ಜೊತೆಗೆ ತೆರಳುತ್ತಿದ್ದರು. ಕೆಂಪುಕೋಟೆಯಿಂದ ಕ್ಯಾಬ್ ಕಾಯ್ದಿರಿಸಿ, ರಿಂಗ್ ರಸ್ತೆಯಿಂದ ಪ್ರಗತಿ ಮೈದಾನದ ಸುರಂಗ ಮಾರ್ಗದ ಒಳಗೆ ಹೋಗುತ್ತಿದ್ದಾಗ, ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕ್ಯಾಬ್ ನಿಲ್ಲಿಸಿದ್ದಾರೆ. ಪಿಸ್ತೂಲ್ ತೋರಿಸಿ ಹಣ ಬ್ಯಾಗ್ ಅನ್ನು ದೋಚಿದ್ದಾರೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದರೋಡೆಕೋರರು ಪರಾರಿಯಾದ ನಂತರ ಉದ್ಯಮಿ, ಪೊಲೀಸರಿಗೆ ಕರೆ ಕರೆ ಮಾಡಿ ದೂರು ನೀಡಿದ್ದಾರೆ.