ಮುಂಗೇರ್(ಬಿಹಾರ) : ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳು ಇನ್ನೋರ್ವ ಮಹಿಳೆಗೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಮದ್ದುಗುಂಡು ಮಹಿಳೆಯ ಎದೆಭಾಗದಲ್ಲಿ ಸಿಲುಕಿ ಆರು ದಿನಗಳ ಕಾಲ ಚಿಕಿತ್ಸೆ ಸಿಗದೇ ಪರದಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಇಲ್ಲಿನ ಮುಫಾಸಿಲ್ ಪೊಲೀಸ್ ಠಾಣಾ ವ್ಯಾಪ್ತಿ ನಿವಾಸಿಯಾದ ಕಾಜಲ್ ದೇವಿ ಗಾಯಗೊಂಡ ಮಹಿಳೆಯಾಗಿದ್ದು, ಪೂನಮ್ ಸಿಂಗ್ ಗುಂಡಿನ ದಾಳಿ ನಡೆಸಿದ ಮಹಿಳೆ ಎಂದು ತಿಳಿದು ಬಂದಿದೆ.
ಕಳೆದ ಡಿಸೆಂಬರ್ 7ರಂದು ಬೆಳಗ್ಗೆ ಮುಫಾಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಟಿಕಾರಾಮ್ ನಿವಾಸಿಯಾಗಿರುವ ಕಾಜಲ್ ದೇವಿ ಅವರ ಪತಿ ಕನ್ಹಯ್ಯಾ ಮತ್ತು ಅವರ ಪಕ್ಕದ ಮನೆ ನಿವಾಸಿಯಾಗಿರುವ ಪೂನಂ ಸಿಂಗ್ ನಡುವೆ 500 ರೂಪಾಯಿಗೆ ಜಗಳ ಆರಂಭವಾಗಿತ್ತು. ಈ ವೇಳೆ, ಪತಿಯ ಪರ ಕಾಜಲ್ ದೇವಿ ವಕಾಲತ್ತು ವಹಿಸಿಕೊಂಡು ಬಂದಿದ್ದಾರೆ. ಈ ವೇಳೆ, ಇಬ್ಬರ ನಡುವೆ ವಾಗ್ವಾದ ಮುಂದುವರೆದಿದ್ದು, ಈ ವೇಳೆ ಪೂನಂ ಸಿಂಗ್ ತನ್ನಲ್ಲಿದ್ದ ಬಂದೂಕಿನಿಂದ ಕಾಜಲ್ ಮೇಲೆ ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಕಾಜಲ್ ದೇವಿ ಅವರನ್ನು ಪತಿ ಕನ್ಹಯ್ಯಾ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
500 ರೂಪಾಯಿಗೆ ಗುಂಡಿನ ದಾಳಿ :ಈ ಬಗ್ಗೆ ಪ್ರತಿಕ್ರಿಯಿಸಿದ ಕಾಜಲ್ ದೇವಿ ಪತಿ ಕನ್ಹಯ್ಯಾ, ಕೇವಲ 500 ರೂಪಾಯಿಗೆ ಜಗಳ ಪ್ರಾರಂಭವಾಯಿತು. ಈ ವೇಳೆ ಪೂನಂ ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದ್ದು, ಅದು ನನ್ನ ಪತ್ನಿ ಕಾಜಲ್ ದೇವಿಗೆ ಹೊಟ್ಟೆಗೆ ತಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ನಾನು ಪೂನಂ ಸಿಂಗ್ಗೆ 500 ರೂಪಾಯಿ ನೀಡಿದ್ದೆ. ಆಕೆಯು ತನ್ನ ಸೋದರ ಮಾವನಿಗೆ ಆರೋಗ್ಯ ಸರಿಯಿಲ್ಲ ಎಂದು ದುಡ್ಡು ಪಡೆದುಕೊಂಡಿದ್ದಳು. ಆದರೆ ಮಾವನಿಗೆ ಚಿಕಿತ್ಸೆ ಕೊಡಿಸುವ ಬದಲಾಗಿ ಮದ್ಯಪಾನ ಮಾಡಿ ಮುಗಿಸಿದ್ದಾಳೆ. ಇದನ್ನು ಪ್ರಶ್ನಿಸಿದ ತನ್ನ ಪತ್ನಿ ಮೇಲೆ ಆಕೆ ಗುಂಡಿನ ದಾಳಿ ನಡೆಸಿದ್ದಳು ಎಂದು ಅವರು ಹೇಳಿದರು.