ಅಹಮದಾಬಾದ್ (ಗುಜರಾತ್): ಸುಮಾರು 32 ಕೋಟಿ ರೂಪಾಯಿ ಮೌಲ್ಯದ 3.221 ಕೆ.ಜಿ ಕಪ್ಪು ಕೊಕೇನ್ ಸಾಗಿಸುತ್ತಿದ್ದ ಬ್ರೆಜಿಲ್ ಪ್ರಜೆಯೊಬ್ಬನನ್ನು ಗುಜರಾತ್ನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಸಾವೊ ಪಾಲೊ ಬಂಧಿತ ಬ್ರೆಜಿಲ್ ಪ್ರಜೆ ಎಂದು ಗುರುತಿಸಲಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೆಸ್ಟಿಂಗ್ ಕಿಟ್ ಬಳಸಿ ಶ್ವಾನ ದಳ ತಪಾಸಣೆ ನಡೆಸಿತು. ಆರಂಭದಲ್ಲಿ ಯಾವುದೇ ಪ್ರಯಾಣಿಕರ ಟ್ರಾಲಿ ಅಥವಾ ಕ್ಯಾಬಿನ್ ಬ್ಯಾಗ್‌ನಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬರಲಿಲ್ಲ. ಆದಾಗ್ಯೂ, ಬ್ಯಾಗ್ನ ತಳ ಭಾಗದಲ್ಲಿ ದಪ್ಪವಾದ ರಬ್ಬರ್ ಹೊಂದಿರುವುದನ್ನು ಕಂಡುಹಿಡಿಯಲಾಯಿತು. ಅದನ್ನು ಬಿಡಿಸಿ ನೋಡಿದಾಗ ಹರಳಿನಂತಹ ಕಪ್ಪು ವಸ್ತು ಪತ್ತೆಯಾಗಿದೆ.
ಅಹಮದಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ಕರೆಸಿ ಹರಳಿನ ಕಪ್ಪು ವಸ್ತುವನ್ನು ಪರೀಕ್ಷಿಸಲಾಯಿತು. ಆಗ ಕೊಕೇನ್ ಎಂದು ದೃಢಪಟ್ಟಿದೆ. ಇದರ ತೂಕವು 3.221 ಕೆ.ಜಿ ಇತ್ತು. ಈ ರೂಪದ ಕೊಕೇನ್ ಅನ್ನು ಇದ್ದಿಲು ಮತ್ತು ಇತರ ರಾಸಾಯನಿಕಗಳೊಂದಿಗೆ ಬೆರೆಸಲಾಗುತ್ತದೆ. ಇದು ಕಪ್ಪು ರಬ್ಬರಿನ ನೋಟ ನೀಡುತ್ತದೆ. ಕಳ್ಳತನದಿಂದ ಸಾಗಿಸಲು ಮತ್ತು ಶ್ವಾನ ದಳ ಮತ್ತು ಫೀಲ್ಡ್ ಟೆಸ್ಟಿಂಗ್ ಕಿಟ್‌ಗಳಿಂದ ಪತ್ತೆ ಹಚ್ಚುವಿಕೆ ತಪ್ಪಿಸುವುದು ಇದರ ಉದ್ದೇಶ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 30 ಕೋಟಿ ರೂ. ಮೌಲ್ಯದ ಕೊಕೇನ್ ವಶ : ಲೈಬೀರಿಯನ್ ಮಹಿಳೆ ಬಂಧನ