ನವದೆಹಲಿ:ಎರಡು ವರ್ಷಗಳ ಹಿಂದೆ ದೆಹಲಿ ಪೊಲೀಸ್ ಮಹಿಳಾ ಕಾನ್ಸ್ಟೇಬಲ್ನ್ನು ಹತ್ಯೆಗೈದ ಪ್ರಕರಣವನ್ನು ಕ್ರೈಂ ಬ್ರಾಂಚ್ ಭೇದಿಸಿದ್ದು, ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಿದೆ. 8 ಸೆಪ್ಟೆಂಬರ್ 2021 ರಂದು ದೆಹಲಿ ಪೊಲೀಸರ ಹೆಡ್ ಕಾನ್ಸ್ಟೇಬಲ್ನಿಂದ ಮಹಿಳಾ ಕಾನ್‌ಸ್ಟೇಬಲ್ ಹತ್ಯೆಯಾಗಿತ್ತು. ಕೊಲೆ ಮಾಡಿದ ನಂತರ ಆರೋಪಿಗಳು ಆಕೆಯ ಶವವನ್ನು ಚರಂಡಿಯಲ್ಲಿ ಹೂತು ಹಾಕಿದ್ದರು. ಈ ಘಟನೆ ನಡೆದು ಎರಡು ವರ್ಷಗಳ ಬಳಿಕ ಅಪರಾಧ ವಿಭಾಗದ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.
ಆರೋಪಿ ಹೆಡ್ ಕಾನ್‌ಸ್ಟೇಬಲ್ ಸುರೇಂದ್ರ, ಆತನ ಸೋದರ ಮಾವ ರವಿನ್ ಮತ್ತು ಆತನ ಸ್ನೇಹಿತ ರಾಜ್ ಪಾಲ್ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸುರೇಂದ್ರ ಅವರ ಹೇಳಿಕೆ ಮೇರೆಗೆ ಪೊಲೀಸರು ಮಹಿಳಾ ಪೇದೆಯ ಅಸ್ಥಿಪಂಜರವನ್ನು ಚರಂಡಿಯಿಂದ ವಶಪಡಿಸಿಕೊಂಡರು. ಅಸ್ಥಿಪಂಜರವನ್ನು ವಿಧಿವಿಜ್ಞಾನ ತನಿಖೆಗೆ ಕಳುಹಿಸಲಾಗಿದ್ದು, ಮಹಿಳಾ ಪೇದೆಯ ತಾಯಿಯ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತಿದೆ.
ಏನಿದು ಪ್ರಕರಣ: 2012ರಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಸುರೇಂದ್ರ ನೇಮಕಗೊಂಡಿದ್ದರು. ಅವರು ತಮ್ಮ ಪತ್ನಿ ಮತ್ತು 12 ವರ್ಷದ ಮಗುವಿನೊಂದಿಗೆ ಅಲಿಪುರದಲ್ಲಿ ವಾಸಿಸುತ್ತಿದ್ದಾರೆ. ಅವರ ಕರ್ತವ್ಯ ಪಿಸಿಆರ್‌ನಲ್ಲಿತ್ತು. ಸುರೇಂದ್ರ ಅವರು 2019 ರಲ್ಲಿ ಪಿಸಿಆರ್‌ನಲ್ಲಿಯೇ ಪೋಸ್ಟ್ ಮಾಡಲಾಗಿದ್ದ ಮಹಿಳಾ ಕಾನ್‌ಸ್ಟೇಬಲ್ ಭೇಟಿ ಮಾಡಿದರು. ಕೆಲವು ತಿಂಗಳ ನಂತರ ಮಹಿಳಾ ಕಾನ್‌ಸ್ಟೇಬಲ್ ಯುಪಿ ಪೊಲೀಸ್‌ನಲ್ಲಿ ಎಸ್‌ಐ ಹುದ್ದೆಗೆ ಆಯ್ಕೆಯಾದರು. ಇದಾದ ನಂತರ ಮಹಿಳಾ ಕಾನ್‌ಸ್ಟೇಬಲ್ ದೆಹಲಿ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿ ಮುಖರ್ಜಿ ನಗರದ ಪಿಜಿಯಲ್ಲಿದ್ದುಕೊಂಡು ಯುಪಿಎಸ್‌ಸಿಗೆ ತಯಾರಿ ಆರಂಭಿಸಿದ್ದರು. ಸುರೇಂದ್ರ ತಾನು ಅವಿವಾಹಿತನೆಂದು ಹೇಳಿಕೊಂಡು ಮಹಿಳಾ ಕಾನ್‌ಸ್ಟೇಬಲ್ ಅವರ ಸ್ನೇಹ ಬೆಳೆಸಿದ್ದ. ಅಲ್ಲದೆ ಅವರನ್ನು ಭೇಟಿಯಾಗುತ್ತಲೇ ಇದ್ದ ಎಂದು ಅಪರಾಧ ವಿಭಾಗದ ವಿಶೇಷ ಆಯುಕ್ತ ಆರ್‌ಎಸ್ ಯಾದವ್ ಹೇಳಿದ್ದಾರೆ.
ಮದುವೆಯ ರಹಸ್ಯ ಬಯಲಾದಾಗ ಕೊಲೆ: ಯುವತಿ ಯುಪಿಎಸ್‌ಸಿಯಲ್ಲಿ ದೊಡ್ಡ ಅಧಿಕಾರಿಯಾಗುತ್ತಾಳೆ ಎಂದು ಸುರೇಂದ್ರ ಭಾವಿಸಿದ್ದ. ಆದ್ದರಿಂದ ಆಕೆಯನ್ನು ಮದುವೆಯಾಗಲು ಸುರೇಂದ್ರ ನಿರ್ಧರಿಸಿದನು. ಅಷ್ಟರಲ್ಲಿ ಆತನಿಗೆ ಮದುವೆಯಾಗಿದ್ದು, ತನಗೆ ಮೋಸ ಮಾಡುತ್ತಿದ್ದಾನೆ ಎಂಬುದು ಮಹಿಳಾ ಕಾನ್ಸ್ಟೇಬಲ್ಗೆ ಗೊತ್ತಾಗಿದೆ. ಆತನ ಕುಟುಂಬದೊಂದಿಗೆ ಮಹಿಳಾ ಕಾನ್‌ಸ್ಟೇಬಲ್ ಮಾತನಾಡಲು ಬಯಸಿದ್ದರು. ಈ ವಿಷಯ ಸುರೇಂದ್ರನಿಗೆ ಅಸಮಾಧಾನವನ್ನುಂಟು ಮಾಡಿತು. ಆದರೂ ಸಹಿತ ತನ್ನ ಪ್ರೇಮಿಯ ನಂಬಿಕೆಯನ್ನು ಗೆಲ್ಲಲು ಆಕೆಯನ್ನು ಸೆಪ್ಟೆಂಬರ್ 8 ರಂದು ತನ್ನ ಹಳ್ಳಿಯ ಅಲಿಪುರಕ್ಕೆ ಆಟೋದಲ್ಲಿ ಕರೆದೊಯ್ದಿದ್ದನು.