ನವದೆಹಲಿ: ಖಾಸಗಿ ಆನ್ಲೈನ್ ಶಾಪಿಂಗ್ ವೆಬ್ಸೈಟ್ವೊಂದರ ಕಂಪನಿಯಲ್ಲಿ ಹಿರಿಯ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಹರ್ಪ್ರೀತ್ ಗಿಲ್ (36) ಕೊಲೆಯಾದ ವ್ಯಕ್ತಿಯಾಗಿದ್ದು, ಇವರ ಸಂಬಂಧಿ ಗೋವಿಂದ್ ಸಿಂಗ್ ಎಂಬುವವರು ಕೂಡ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಲ್ಲಿನ ಭಜನಪುರ ಪ್ರದೇಶದ ಸುಭಾಷ್ ವಿಹಾರ ಪ್ರದೇಶದಲ್ಲಿ ಕಳೆದ ರಾತ್ರಿ 11.20ರ ಸುಮಾರಿಗೆ ಐವರು ದುಷ್ಕರ್ಮಿಗಳ ತಂಡ ಇಬ್ಬರ ಮೇಲೂ ಗುಂಡಿನ ದಾಳಿ ನಡೆಸಿದೆ. ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದ ಗಿಲ್ ಅವರಿಗೆ ತಲೆಗೆ ಗುಂಡು ಹಾರಿಸಲಾಗಿದೆ. ತಲೆಯ ಬಲಭಾಗದ ಕಿವಿಯ ಹಿಂದೆ ಹೊಕ್ಕ ಗುಂಡು ಇನ್ನೊಂದು ಬದಿಯಿಂದ ಹೊರಗಡೆ ಬಂದಿದೆ ಎಂದು ದೆಹಲಿಯ ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಜೋಯ್ ಟೆಕ್ರಿ ತಿಳಿಸಿದ್ದಾರೆ.
ಗುಂಡೇಟಿನ ನಂತರ ಗಿಲ್ ಅವರನ್ನು ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಗಾಯಾಳು ಸಿಂಗ್ ಅವರನ್ನು ಲೋಕ್ ನಾಯಕ್ ಜೈಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಿಲ್ ಹಾಗೂ ಸಿಂಗ್ ಇಬ್ಬರು ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಸ್ಕೂಟರ್ ಹಾಗೂ ಬೈಕ್ ಮೇಲೆ ಬಂದ ದುಷ್ಕರ್ಮಿಗಳ ತಂಡ ಗುಂಡಿನ ದಾಳಿ ಮಾಡಿದೆ. ಈ ಕೃತ್ಯಕ್ಕೆ ಈವರೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ತನಿಖೆ ಹಾಗೂ ದಾಳಿಕೋರರ ಪತ್ತೆಗೆ ಆರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಅಲ್ಲದೇ, ಆರೋಪಿಗಳ ಗುರುತು ಪತ್ತೆ ಹಚ್ಚಲು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ.