ಮುಂಬೈ:ವಿಶ್ವಕಪ್ ಕ್ರಿಕೆಟ್ ಟೂರ್ನಿ ಮಹತ್ವದ ಹಂತ ತಲುಪಿದೆ. ಇಂದು (ಬುಧವಾರ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಮೊದಲ ಸೆಮಿಫೈನಲ್ ಪಂದ್ಯದ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಮುಂಬೈ ಪೊಲೀಸರು ಸೆರೆ ಹಿಡಿದಿದ್ದಾರೆ.
ಕೋಲ್ಕತ್ತಾದಲ್ಲಿ ವಿಶ್ವಕಪ್ ಪಂದ್ಯಗಳ ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು, ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಹೈವೋಲ್ಟೇಜ್ ಸೆಮೀಸ್ ಪಂದ್ಯದ ಟಿಕೆಟ್ ಖರೀದಿಸುವಾಗ ಹೆಚ್ಚು ಜಾಗರೂಕರಾಗಿರಿ ಎಂದು ಕ್ರಿಕೆಟ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದರು. ನ್ಯೂಜಿಲೆಂಡ್-ಭಾರತ ಸೆಮಿಫೈನಲ್ ಪಂದ್ಯದ ವೀಕ್ಷಣೆಗೆ ಆರೋಪಿ, ವಿಐಪಿ ವ್ಯಕ್ತಿಗಳು ಅಥವಾ ವಿಶೇಷ ಆಹ್ವಾನಿತರಿಗೆ ಮೀಸಲಿರುವ ತಲಾ 1.2 ಲಕ್ಷ ರೂಪಾಯಿ ಮೌಲ್ಯದ ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನು ದುಬಾರಿ ಹಣಕ್ಕಾಗಿ ಬ್ಲಾಕ್ ಮಾರ್ಕೆಟಿಂಗ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ಕುರಿತ ಸುಳಿವು ಆಧರಿಸಿ ತಕ್ಷಣ ಆರೋಪಿಯನ್ನು ಬಂಧಿಸಿದ್ದು, ಎರಡು ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳವಾರ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.