ಪ್ರಕಾಶರೆಡ್ಡಿಪೇಟೆ( ತೆಲಂಗಾಣ): ಪ್ರತಿಯೊಬ್ಬರಿಗೂ ಚೆನ್ನಾಗಿ ಓದಿ ಚೆನ್ನಾಗಿ ಸಂಪಾದನೆ ಮಾಡಬೇಕು ಎಂಬ ಕನಸು ಇದ್ದೇ ಇರುತ್ತದೆ. ಆದರೆ ಕೆಲವರಿಗೆ ತಮ್ಮ ಕನಸು ನನಸು ಮಾಡಿಕೊಳ್ಳಲು ಬೇಕಾದ ಸವಲತ್ತುಗಳಿದ್ದರೆ ಇನ್ನೂ ಕೆಲವರು ಆ ಸಂಪತ್ತಗಳ ಅಭಾವದಿಂದಲೇ ತಮ್ಮ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸುತ್ತಾರೆ. ಅಥವಾ ಸಂಪೂರ್ಣ ಶಿಕ್ಷಣದಿಂದಲೇ ವಂಚಿತರಾಗಿ ಬಿಡುತ್ತಾರೆ. ಬಡತನ, ಕೌಟುಂಬಿಕ ಹಿನ್ನೆಲೆ ಒಬ್ಬ ವ್ಯಕ್ತಿಯ ಸೀಮಿತ ವೃತ್ತಿ ಬೆಳವಣಿಗೆಗೆ ಪ್ರಮುಖ ಕಾರಣಗಳಾಗುತ್ತವೆ. ಹಾಗಾಗಿ ಸಾಕ್ಷರತೆಯ ಮಹತ್ವ ಗುರುತಿಸಿ ಪ್ರೇರಣಾ ಫೌಂಡೇಶನ್ನವರು ವಯಸ್ಕರಿಗೆ ಶಿಕ್ಷಣ ನೀಡುವ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಹನುಮಕೊಂಡದ ಬಾಲಸಮುದ್ರ ತರಕಾರಿ ಮಾರುಕಟ್ಟೆಗೊಮ್ಮೆ ಹೊಕ್ಕರೆ ಅಲ್ಲಿನ ವ್ಯಾಪಾರಿಗಳು ತರಕಾರಿ ಮಾರಾಟ ಮಾಡುವುದರೊಂದಿಗೆ ಅಕ್ಷರಗಳನ್ನು ಕಲಿಯುವುದರಲ್ಲೂ ಬ್ಯಸಿಯಾಗಿರುವುದನ್ನು ಗಮನಿಸಬಹುದು. 60 ವರ್ಷ ಮೇಲ್ಪಟ್ಟವರೂ ಮಧ್ಯಾಹ್ನದ ನಂತರ ಅಕ್ಷರಾಭ್ಯಾಸದಲ್ಲಿ ತೊಡಗಿರುತ್ತಾರೆ. ವ್ಯಾಪಾರಿಗಳು ಇಲ್ಲಿ ಮೂರು ತಿಂಗಳಿನಿಂದ ಶಿಕ್ಷಣದ ಮೂಲ ಅಂಶಗಳನ್ನು ಕಲಿಯುತ್ತಿದ್ದಾರೆ. ಅದುವೇ 'ಅಂಗಡಿ ಬದಿ', ಪ್ರೇರಣಾ ಫೌಂಡೇಶನ್ನವರು ಕೈಗೆತ್ತಿಕೊಂಡಿರುವ ಮಾರುಕಟ್ಟೆ ಶಾಲೆ ನೂತನ ಕಾರ್ಯಕ್ರಮ.
ಬೋರ್ಡ್, ಮೇಜುಗಳಿಲ್ಲದೆ ಪಾಠ:ಪ್ರೇರಣಾ ಫೌಂಡೇಶನ್ ಹನುಮಕೊಂಡದ ಪ್ರಕಾಶರೆಡ್ಡಿಪೇಟೆಯ ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗಾಗಿ ತಾತ್ಕಾಲಿಕ ಶಾಲೆಯನ್ನು ಪ್ರಾರಂಭಿಸಿದ್ದರು. ಮಕ್ಕಳ ಶಿಕ್ಷಣದ ಹಸಿವಿನ ಜೊತೆಗೆ ಹೊಟ್ಟೆಯ ಹಸಿವನ್ನೂ ನೀಗಿಸುವ ಕೆಲಸವನ್ನು ಫೌಂಡೇಶನ್ ಮಾಡುತ್ತಿದೆ. ಇದರೊಂದಿಗೆ ವಯಸ್ಕರ ಶಿಕ್ಷಣದ ಕಡೆ ಗಮನಹರಿಸಿರುವ ಸಂಸ್ಥೆ ತರಕಾರಿ ಮಾರುಕಟ್ಟೆಯಲ್ಲಿ ವಯಸ್ಕರಿಗೆ ಶಾಲೆಯನ್ನು ಪ್ರಾರಂಭಿಸಿದೆ. ಆದರೆ ಇಲ್ಲಿ ಯಾವುದೇ ಬೆಂಚು, ಕುರ್ಚಿ, ಮೇಜುಗಳಿಲ್ಲ. ಅವುಗಳಿಲ್ಲದೆಯೇ ಹಿರಿಯರು ಅಕ್ಷರಜ್ಞಾನ ಪಡೆಯುತ್ತಿದ್ದಾರೆ.
ದಿನಕ್ಕೆ ಎರಡು ಗಂಟೆ ಪಾಠ:ಮಾರುಕಟ್ಟೆಯಲ್ಲಿರುವ ವ್ಯಾಪಾರಿಗಳಲ್ಲಿ ಶೇ 70ರಷ್ಟು ಮಹಿಳೆಯರಿದ್ದಾರೆ. ಅದರಲ್ಲೂ ಹೆಚ್ಚಿನವರು ಅನಕ್ಷರಸ್ಥರು. ಫೌಂಡೇಶನ್ನವರು ಅವರೆಲ್ಲರಿಗೂ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಒಟ್ಟು ಎರಡು ಗಂಟೆಗಳ ಕಾಲ ಪಾಠ ಮಾಡುತ್ತಾರೆ. ತಮ್ಮ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪುಸ್ತಕ, ಪೆನ್ಸಿಲ್, ಚಾಕ್, ಪೆನ್ಗಳನ್ನು ತಾವೇ ಪೂರೈಸುತ್ತಾರೆ. ಮಾರುಕಟ್ಟೆಯಲ್ಲಿರುವ ಇತರ ಅಕ್ಷರಸ್ಥ ವ್ಯಾಪಾರಿಗಳೂ ಇವರ ಅಕ್ಷರ ಕಲಿಕೆಯ ಕೆಲಸಕ್ಕೆ ಸಹಾಯವಾಗುವ ಮೂಲಕ ಪ್ರೇರಣಾ ಫೌಂಡೇಶನ್ನ ಮಹತ್ವದ ಗುರಿಗೆ ಬೆಂಬಲವಾಗುತ್ತಿದ್ದಾರೆ.