ಬರೇಲಿ(ಉತ್ತರ ಪ್ರದೇಶ):ಭಗ್ನ ಪ್ರೇಮಿಯೊಬ್ಬ ಪೊಲೀಸ್ ಕಟ್ರೋಲ್ ರೂಂಗೆ ಕರೆ ಮಾಡಿ ‘ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಆಕೆ ಒಪ್ಪಲಿಲ್ಲವೆಂದ್ರೆ ಕೊಲೆ ಮಾಡುತ್ತೇನೆ’ ಎಂದು ಬೆದರಿಕೆ ಕರೆ ಮಾಡಿದ್ದಾನೆ. ಮರು ದಿನ ಭಗ್ನ ಪ್ರೇಮಿ ಯುವತಿಯೊಬ್ಬಳನ್ನು ಕೊಲೆ ಮಾಡಿ ಕೆರೆಯಲ್ಲಿ ಎಸೆದು ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ಈ ಪ್ರಕರಣವನ್ನು ಬೆನ್ನತ್ತಿ ಹೋದಾಗ ಅಚ್ಚರಿ ಮೇಲೊಂದು ಅಚ್ಚರಿ ಸಂಗತಿಗಳು ಹೊರ ಬಿದ್ದಿವೆ.
ಏನಿದು ಘಟನೆ: ಬರೇಲಿಯ ಭಮೋರಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪಿಯು ವಿದ್ಯಾರ್ಥಿನಿ ಶಿವಾನಿ ಶವ ಬುಧವಾರ ಬೆಳಗ್ಗೆ ಪೊಲೀಸರಿಗೆ ನೀರಿನ ಹೊಂಡದಲ್ಲಿ ಪತ್ತೆಯಾಗಿದೆ. ಹರಿತವಾದ ಆಯುಧದಿಂದ ಇರಿದು ವಿದ್ಯಾರ್ಥಿನಿಯನ್ನು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಶವವನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ ಬರೇಲಿ ಪೊಲೀಸರಿಗೆ ಶಾಕ್ ಮೇಲೆ ಶಾಕ್ ಆಗಿದೆ.
ತನಿಖೆ ಆರಂಭ :ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಮೊದಲಿಗೆ ಶಿವಾನಿ ಫೋನ್ ಕರೆಗಳನ್ನು ಪರಿಶೀಲಿಸಿದ್ದಾರೆ. ಶಿವಾನಿ ಕೊನೆಯಾದಾಗಿ ಅಜಯ್ ಎಂಬ ಯುವಕನೊಂದಿಗೆ ಮಾತನಾಡಿದ್ದಾಳೆ. ಕೂಡಲೇ ಪೊಲೀಸರು ಅಜಯ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದರು. ಈ ವೇಳೆ ಅಜಯ್ ಆ ಫೋನ್ ನಂದು. ಆದ್ರೆ ನನ್ನ ಫೋನ್ ಏಪ್ರಿಲ್ 4ರಂದು ಕಳ್ಳತನವಾಗಿದೆ ಎಂದು ಪೊಲೀಸರ ಮುಂದೆ ಹೇಳಿದ್ದಾನೆ. ಈ ಮೂಲಕ ಶಿವಾನಿ ಜೊತೆ ಮಾತನಾಡಿದ್ದು ಅಜಯ್ ಅಲ್ಲ ಎಂಬುದು ಪೊಲೀಸರಿಗೆ ತಿಳಿಯಿತು. ಹಾಗಾದ್ರೆ ಶಿವಾನಿ ಜೊತೆ ಮಾತನಾಡಿದ್ದು ಯಾರು ಎಂಬುದನ್ನು ತಿಳಿಯಲು ಪೊಲೀಸರು ಮತ್ತೆ ತನಿಖೆ ಆರಂಭಿಸಿದರು.
ಯಾರ್ ಅವನು?:ತನಿಖೆ ಸಂದರ್ಭದಲ್ಲಿ ಅಜಯ್ ಕದ್ದ ನಂಬರ್‌ನ ಕರೆ ವಿವರಗಳನ್ನು ಪೊಲೀಸರು ಪಡೆದಾಗ ಮತ್ತೊಂದು ಕಥೆ ಮುನ್ನೆಲೆಗೆ ಬಂತು. ಪೊಲೀಸರು ಆ ಕರೆ ಬಗ್ಗೆ ಅಜಯ್‌ನನ್ನು ಕೇಳಿದಾಗ ಆ ಕರೆ ಮಾಡಿದ್ದು ನಾನಲ್ಲ, ಗ್ರಾಮದ ನಿವಾಸಿ ವಿಕಾಸ್ (19 ವರ್ಷ) ಎಂಬಾತನು ಎಂದು ಹೇಳಿದ್ದಾನೆ. ನಂತರ ಪೊಲೀಸರು ವಿಕಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಂಟರ್ ವಿದ್ಯಾರ್ಥಿಯ ಕೊಲೆಯ ಸಂಪೂರ್ಣ ಕಥೆ ಬಯಲು ಮಾಡಿದ್ದಾನೆ. ಇಷ್ಟೇ ಅಲ್ಲ, ಮತ್ತೊಂದು ಬೆದರಿಕೆಯ ಕರೆ ಮಾಡಿದ್ದು ಈತನೇ ಎಂಬುದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ಆರೋಪಿ ಹೇಳಿದ್ದೇನು?: ವಿಕಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಲು ಬಯಸಿರುವುದಾಗಿ ತಿಳಿಸಿದ್ದಾನೆ. ಮೊದಲಿಗೆ ನಾನು ಅಜಯ್ನ ಮೊಬೈಲ್ ಕದ್ದಿದ್ದೇನೆ. ಬಳಿಕ ಶಿವಾನಿ ಜೊತೆ ಸ್ನೇಹ ಬೆಳೆಸಲು ಮುಂದಾದೆ. ಬಳಿಕ ಆಕೆಗೆ ರಾಹುಲ್ ಎಂದು ಫೋನ್ನಲ್ಲಿ ಮಾತನಾಡುತ್ತಿದ್ದೆ ಎಂದು ಹೇಳಿದ್ದಾನೆ.