ನವದೆಹಲಿ:"ಪ್ರಜಾಪ್ರಭುತ್ವದ ಕತ್ತುನ್ನು ಈ ಸರ್ಕಾರ ಹಿಸುಕಿದ್ದು, ಹಿಂದೆಂದೂ ಕೂಡ ಇಷ್ಟು ಪ್ರಮಾಣದಲ್ಲಿ ವಿರೋಧ ಪಕ್ಷದ ಸದಸ್ಯರನ್ನು ಸದನದಿಂದ ಅಮಾನತುಗೊಳಿಸಿಲ್ಲ" ಎಂದು ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು. ಸಂಸತ್ ಭವನದ ಸೆಂಟ್ರಲ್ ಹಾಲ್‌ನ ಸಂವಿಧಾನ್ ಸದನ್‌ನಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ವಿರೋಧ ಪಕ್ಷದ ಸದಸ್ಯರನ್ನು ಸದನದಿಂದ ಅಮಾನತು ಮಾಡಿರುವುದು ಸರಿಯಲ್ಲ. ಡಿಸೆಂಬರ್ 13ರಂದು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರಿ ಭದ್ರತಾ ಲೋಪ ಉಂಟಾಗಿದೆ. ಲೋಕಸಭೆ ಕಲಾಪ ನಡೆಯುತ್ತಿದ್ದ ಸಮಯದಲ್ಲಿ ಇಬ್ಬರು ಯುವಕರು ಸದನದೊಳಗೆ ನುಗ್ಗಿ ಕಲಾಪಕ್ಕೆ ತೀವ್ರ ಅಡ್ಡಿ ಉಂಟು ಮಾಡಿರುವುದು ಅಕ್ಷಮ್ಯ ಮತ್ತು ಸಮರ್ಥನೀಯವಲ್ಲ'' ಎಂದರು.
ಪ್ರಧಾನಿ ರಾಷ್ಟ್ರವನ್ನು ಉದ್ದೇಶಿಸಿ ಮತ್ತು ಘಟನೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನಾಲ್ಕು ದಿನಗಳನ್ನು ತೆಗೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಸಂಸತ್ತಿನ ಹೊರಗೆ ಪ್ರಕ್ರಿಯಿಸಿದ್ದಾರೆ. ಹೀಗೆ ಮಾಡುವ ಮೂಲಕ ಅವರು ತಮ್ಮ ತಿರಸ್ಕಾರ ಮನೋಭಾವವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಸದನದ ಘನತೆಗಾಗಿ ಮತ್ತು ನಮ್ಮ ದೇಶದ ಜನರ ಬಗ್ಗೆ ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ" ಎಂದು ಸೋನಿಯಾ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
"ಈ ಬಾರಿಯ ಚಳಿಗಾಲದ ಅಧಿವೇಶನವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಮಸೂದೆಗಳನ್ನು ಅಂಗೀಕರಿಸಿದೆ. ಜವಾಹರಲಾಲ್ ನೆಹರು ಅವರಂತಹ ಮಹಾನ್ ದೇಶಭಕ್ತರ ಮಾನಹಾನಿಗಾಗಿ ಇತಿಹಾಸವನ್ನು ತಿರುಚಲಾಗುತ್ತಿದೆ. ಐತಿಹಾಸಿಕ ಸತ್ಯಗಳನ್ನು ತಿರುಚುವ ನಿಟ್ಟಿನಲ್ಲಿ ಅವಿರತ ಪ್ರಚಾರವನ್ನು ನಡೆಸಲಾಗುತ್ತಿದೆ. ಈ ಪ್ರಯತ್ನಗಳಲ್ಲಿ ಪ್ರಧಾನಿ ಮತ್ತು ಗೃಹ ಸಚಿವರು ಸ್ವತಃ ನೇತೃತ್ವ ವಹಿಸಿದ್ದಾರೆ. ಆದರೆ, ನಾವು ಹೆದರುವುದಿಲ್ಲ, ನಾವು ಸತ್ಯವನ್ನು ಹೇಳಲು ಯಾವತ್ತೂ ಹಿಂಜರಿಯುವುದಿಲ್ಲ. ನಾವು ಸತ್ಯ ನುಡಿಯುವ ಕಾರ್ಯವನ್ನು ಮುಂದುವರಿಯುತ್ತೇವೆ" ಎಂದು ಸೋನಿಯಾ ಗಾಂಧಿ ಕಿಡಿಕಾರಿದರು.