ಜಾರ್ಖಂಡ್ : ರಾಜಧಾನಿ ರಾಂಚಿಯಲ್ಲಿ ಸಿಪಿಐಎಂ ಮುಖಂಡರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದಲಾದ್ಲಿ ಚೌಕ್ ಬಳಿಯ ಕಚೇರಿಯಲ್ಲಿ ಕುಳಿತಿದ್ದ ಸಿಪಿಐ (ಎಂ) ನಾಯಕ ಸುಭಾಷ್ ಮುಂಡಾ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬುಧವಾರ ರಾತ್ರಿ 7 ರಿಂದ 8 ಗಂಟೆಯ ನಡುವೆ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ಆರೋಪಿಗಳು ಸುಭಾಷ್ ಮುಂಡಾ ಮೇಲೆ 7 ಬಾರಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಘಟನೆ ನಡೆದ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ದಲ್ದಾಲಿ ಚೌಕ್ ಬಗೀಚ ಟೋಲಿ ನಿವಾಸಿಯಾದ ಸುಭಾಷ್ ಮುಂಡಾ ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯರಾಗಿದ್ದರು. ಗುರುವಾರ ರಾಜ್ಯ ಸಮಿತಿ ಸಭೆ ನಿಗದಿಯಾಗಿದ್ದು, ಸುಭಾಷ್ ಕೂಡ ಪಾಲ್ಗೊಳ್ಳಬೇಕಿತ್ತು. ಅಷ್ಟೇ ಅಲ್ಲದೆ, ಅವರು ಹಟಿಯಾ ಕ್ಷೇತ್ರದಿಂದ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಮಂದರ್ ಕ್ಷೇತ್ರದಿಂದ ಉಪಚುನಾವಣೆಗೆ ಸ್ಪರ್ಧಿಸಿದ್ದರು.
ಕಮಲ್ ಭೂಷಣ್ ಆಪ್ತರಾಗಿದ್ದ ಸುಭಾಷ್ : ಕೊಲೆಗೀಡಾದ ಸುಭಾಷ್ ಮುಂಡಾ ಅವರು ರಾಂಚಿಯ ಪ್ರಸಿದ್ಧ ಬಿಲ್ಡರ್ ಮತ್ತು ಉದ್ಯಮಿ ದಿವಂಗತ ಕಮಲ್ ಭೂಷಣ್ ಅವರಿಗೆ ಬಹಳ ನಿಕಟರಾಗಿದ್ದರು. ಕಮಲ್ ಭೂಷಣ್ ಅವರ ಇನ್ನೊಬ್ಬ ಆಪ್ತಸ್ನೇಹಿತನನ್ನು ಕ್ರಿಮಿನಲ್‌ಗಳು ಗುಂಡಿಕ್ಕಿ ಕೊಂದ ಒಂದು ತಿಂಗಳ ಅವಧಿಯಲ್ಲಿ ಸಂಭವಿಸಿದ ಎರಡನೇ ಘಟನೆ ಇದಾಗಿದೆ. ಇದಕ್ಕೂ ಮೊದಲು, ರಾಂಚಿಯ ಪಿಸ್ಕಾ ಮೋರ್‌ನಲ್ಲಿ ಕಮಲ್ ಭೂಷಣ್ ಅವರ ಅಕೌಂಟೆಂಟ್ ಸಂಜಯ್ ಸಿಂಗ್ ಅವರನ್ನು ಖದೀಮರು ಗುಂಡಿಕ್ಕಿ ಕೊಂದಿದ್ದರು. ಈ ಹತ್ಯೆಯಲ್ಲೂ ಕಮಲ್ ಭೂಷಣ್ ಅವರ ಹಳೆಯ ಶತ್ರುಗಳ ಕೈವಾಡವಿದೆ ಎಂಬ ಆತಂಕ ವ್ಯಕ್ತವಾಗಿದೆ.