ನವದೆಹಲಿ: ಕೋವಿಡ್-19 ವ್ಯಾಕ್ಸಿನ್ ನೀಡಲು ತಯಾರಿಸಲಾಗಿರುವ ಕೋವಿನ್ ಪ್ಲಾಟ್‌ಫಾರ್ಮ್ ಅನ್ನು ದೇಶದ ಸಾರ್ವತ್ರಿಕ ಲಸಿಕಾಕರಣ, ರಕ್ತದಾನ ಹಾಗೂ ಅಂಗದಾನಗಳ ಪ್ಲಾಟ್ಫಾರ್ಮ್ವನ್ನಾಗಿ ಮರುರೂಪಿಸಲಾಗುವುದು ಎಂದು ಕೋವಿನ್ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಡಾ. ಆರ್.ಡಿ. ಶರ್ಮಾ ತಿಳಿಸಿದ್ದಾರೆ.
ಕೋವಿನ್ ಆ್ಯಪ್ ಬಳಸಲು ವಿಶ್ವದ ಇತರ ರಾಷ್ಟ್ರಗಳು ಮುಂದಾಗಿರುವ ಬಗ್ಗೆ ಮಾತನಾಡಿದ ಡಾ. ಶರ್ಮಾ, ನಾವು ಕಳೆದ ವರ್ಷ ಕೋವಿನ್ ಡಿಜಿಟಲ್ ಜಾಗತಿಕ ಸಮಾವೇಶವನ್ನು ನಡೆಸಿದ್ದೆವು. ಅದರಲ್ಲಿ 140 ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದವು. ಸಮಾವೇಶದ ನಂತರ ಅನೇಕ ದೇಶಗಳು ನಮ್ಮೊಂದಿಗೆ ಚರ್ಚಿಸಲು ಪ್ರಾರಂಭಿಸಿದವು ಎಂದು ಹೇಳಿದರು.
ಭಾರತದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ ಗಯಾನಾ ದೇಶವು ತಮ್ಮ ಲಸಿಕೆ ಕಾರ್ಯಕ್ರಮಕ್ಕಾಗಿ ಕೋವಿನ್ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಮುಂದಾಗಿದೆ ಎಂದು ಶರ್ಮಾ ತಿಳಿಸಿದರು.