ನವದೆಹಲಿ:ಇಲ್ಲಿಯ ತನಕ ಕೋ-ವಿನ್ ಪ್ಲಾಟ್‌ಫಾರ್ಮ್ ಅನ್ನು ಕೋವಿಡ್ ವ್ಯಾಕ್ಸಿನೇಷನ್ ರೆಕಾರ್ಡಿಂಗ್ ಮತ್ತು ಪ್ರಮಾಣಪತ್ರ ನೀಡಲು ಬಳಸಿಕೊಳ್ಳಲಾಗುತ್ತಿತ್ತು. ಪ್ರಸ್ತುತ ಇರುವ ಕಾರ್ಯವನ್ನು ಮುಂದುವರೆಸುವ ಜೊತೆಗೆ ದೇಶದ ಇತರ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಗೆ ಈ ಪ್ಲಾಟ್‌ಫಾರ್ಮ್ ಅನ್ನು ಮರು ರೂಪಿಸಿ ಬಳಕೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.
ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ (UIP) ಅಡಿ ವ್ಯಾಕ್ಸಿನೇಷನ್ ದಾಖಲೆಯನ್ನು ಈಗ ನಿರ್ವಹಿಸಲಾಗುತ್ತಿದೆ. ದೇಶದಲ್ಲಿ ಜಾರಿಯಲ್ಲಿರುವ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ (ಯುಐಪಿ) ಸೇರಿದಂತೆ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಗೆ ಈ ಆನ್‌ಲೈನ್ ವೇದಿಕೆಯನ್ನು ಬಳಸಿಕೊಳ್ಳಲಾಗುವುದು.
ಇದರ ಜೊತೆಗೆ ಕೋವಿಡ್ ಲಸಿಕೆ ನೀಡಿರುವುದರ ವಿವರಗಳನ್ನು ದಾಖಲಿಸಲು ಹಾಗೂ ಪ್ರಮಾಣಪತ್ರಗಳನ್ನು ನೀಡಲು ಈ ವೇದಿಕೆ ಬಳಕೆಯನ್ನು ಮುಂದುವರಿಸಲಾಗುತ್ತದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಮತ್ತು ಕೋ-ವಿನ್ ಮುಖ್ಯಸ್ಥರಾದ ಡಾ.ಆರ್.ಎಸ್. ಶರ್ಮಾ ಮಾಧ್ಯಮಗಳಿಗೆ ತಿಳಿಸಿದರು.
ಈ ಪ್ರೋಗ್ರಾಂನಿಂದ ಆಗುವ ಲಾಭ ಏನು?:ಯೂನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂನಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದಾದ ರೋಗಗಳಿಂದ ಮಕ್ಕಳು ಮತ್ತು ಗರ್ಭಿಣಿ ತಾಯಂದಿರನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಯೋಜನೆಗಳಲ್ಲಿ ಒಂದಾಗಿದೆ. ಇದರ ಅಡಿಯಲ್ಲಿ, ಪೊಲಿಯೋ, ಡಿಫ್ತೀರಿಯಾ, ಟೆಟನಸ್, ದಡಾರ ಮತ್ತು ಹೆಪಟೈಟಿಸ್ ಬಿ ನಂತಹ 12 ರೋಗಗಳಿಗೆ ಲಸಿಕೆ ನೀಡಲು ಸರ್ಕಾರ ಚಿಂತಿಸಿದೆ.