ನವದೆಹಲಿ:ದೇಶದ ಕೋವಿಡ್ -19 ವ್ಯಾಕ್ಸಿನೇಷನ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಕೋವಿನ್ (CoWIN) ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಜನರ ವೈಯಕ್ತಿಕ ವಿವರಗಳು ಸಾಮಾಜಿಕ ಮಾಧ್ಯಮ ವೇದಿಕೆಯಾದ ಟೆಲಿಗ್ರಾಮ್‌ನಲ್ಲಿ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಇದನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಕೋವಿನ್ ಡೇಟಾಗಳು ಸುಳ್ಳಾಗಿವೆ. ಸೋರಿಕೆಯಾಗಿದೆ ಎಂಬ ಆಪಾದನೆಯ ಬಳಿಕ ತಕ್ಷಣವೇ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್‌ಟಿ-ಇನ್) ಪರಿಶೀಲಿಸಿದೆ ಎಂದು ತಿಳಿಸಿದರು.
ಟೆಲಿಗ್ರಾಮ್‌ನಲ್ಲಿ ಖಾತೆಯೊಂದರಲ್ಲಿ ಹರಿಬಿಡಲಾಗಿರುವ ಫೋನ್ ಸಂಖ್ಯೆಗಳನ್ನು ನಮೂದಿಸಿದ ನಂತರ ಕೋವಿನ್ ಅಪ್ಲಿಕೇಶನ್ ವಿವರಗಳನ್ನು ಅದು ತೆರೆದುಕೊಳ್ಳುತ್ತಿದೆ. ಇದು ಈ ಹಿಂದೆ ಕಳುವಾದ ಡೇಟಾದಿಂದಾಗಿ ಹೀಗಾಗಿರುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದರು.
CoWIN ಅಪ್ಲಿಕೇಶನ್ ಅಥವಾ ಅದರ ದಾಖಲೆಗಳನ್ನು ನೇರವಾಗಿ ಕದಿಯಲಾಗಿದೆ ಎಂದು ತೋರುತ್ತಿಲ್ಲ. ರಾಷ್ಟ್ರೀಯ ದತ್ತಾಂಶ ಆಡಳಿತ ನೀತಿಯನ್ನು ಭದ್ರವಾಗಿಡಲಾಗಿದೆ. ಅದು ಎಲ್ಲಾ ಡೇಟಾ ಸಂಗ್ರಹಣೆ, ಪ್ರವೇಶ ಮತ್ತು ಭದ್ರತಾ ಮಾನದಂಡಗಳ ಚೌಕಟ್ಟನ್ನು ಹೊಂದಿದೆ ಎಂದು ಚಂದ್ರಶೇಖರ್ ಹೇಳಿದರು.
ತೃಣಮೂಲ ಕಾಂಗ್ರೆಸ್ ಆರೋಪ:ಇದಕ್ಕೂ ಮೊದಲು, ಕೋವಿಡ್ ಲಸಿಕೆ ತೆಗೆದುಕೊಂಡ ರಾಜಕಾರಣಿಗಳು ಮತ್ತು ಪತ್ರಕರ್ತರು ಸೇರಿದಂತೆ ಹಲವಾರು ನಾಗರಿಕರ ಡೇಟಾ ಸೋರಿಕೆಯಾಗಿದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಆರೋಪಿಸಿದ್ದರು. ಇಷ್ಟಾದರೂ ಕೇಂದ್ರ ಸರ್ಕಾರಕ್ಕೆ ಮಾಹಿತಿ ಏಕೆ ಲಭ್ಯವಾಗಿಲ್ಲ ಎಂದು ಪ್ರಶ್ನಿಸಿದ್ದರು.
ಸರಣಿ ಟ್ವೀಟ್ ಮಾಡಿದ್ದ ತೃಣಮೂಲ ಕಾಂಗ್ರೆಸ್ ವಕ್ತಾರರಾದ ಗೋಖಲೆ, ಇದೊಂದು ಆಘಾತಕಾರಿ ಸುದ್ದಿ. ಕೇಂದ್ರ ಸರ್ಕಾರದ ಪ್ರಮುಖ ಡೇಟಾಗಳು ಸೋರಿಕೆಯಾಗಿವೆ. ಮೊಬೈಲ್ ಸಂಖ್ಯೆಗಳು, ಆಧಾರ್ ಸಂಖ್ಯೆಗಳು, ಪಾಸ್‌ಪೋರ್ಟ್ ಸಂಖ್ಯೆಗಳು, ಮತದಾರರ ಐಡಿ ಸೇರಿದಂತೆ ಲಸಿಕೆ ಪಡೆದ ಎಲ್ಲಾ ಭಾರತೀಯರ ವೈಯಕ್ತಿಕ ವಿವರಗಳು, ಕುಟುಂಬ ಸದಸ್ಯರ ವಿವರಗಳು ಇತ್ಯಾದಿಗಳು ಸೋರಿಕೆಯಾಗಿವೆ. ಅವು ಸಾಮಾಜಿಕ ಮಾಧ್ಯಮಗಳಲ್ಲಿ ಉಚಿತವಾಗಿ ಲಭ್ಯವಿವೆ ಎಂದು ಬರೆದುಕೊಂಡಿದ್ದರು.
ಖಾಸಗಿ ಮಾಧ್ಯಮವೊಂದು ಈ ಬಗ್ಗೆ ವಿಸ್ತೃತ ವರದಿ ಮಾಡಿದ್ದು, ಕೋವಿನ್ ಡೇಟಾ ಸೋರಿಕೆಯಾದ ನಂತರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಭದ್ರತಾ ಕ್ರಮಗಳ ಬಗ್ಗೆ ಬ್ಯಾಂಕ್‌ಗಳಿಗೆ ಎಚ್ಚರಿಕೆ ನೀಡುವ ಸಾಧ್ಯತೆಯಿದೆ ಎಂದು ಹೇಳಿದೆ. ಆಪಾದಿತ ಸೋರಿಕೆಯ ಮೂಲ ತಿಳಿಯಲು ಹಾಗೂ ಡೇಟಾ ಸರ್ಕಾರದ ಡೊಮೇನ್‌ನ ಹೊರಗಿನ ಜನರ ಕೈಗೆ ಸಿಕ್ಕಿದೆಯೇ ಎಂದು ನಿರ್ಣಯಿಸಲು ತನಿಖೆ ನಡೆಯುತ್ತಿದೆ ಎಂದು ವರದಿ ಹೇಳಿತ್ತು.
ಆಪಾದಿತ ಸೋರಿಕೆಯು CoWIN ಪೋರ್ಟಲ್ ಮೂಲಕ ಸೈನ್ ಅಪ್ ಮಾಡಿದ ನಂತರ ಲಸಿಕೆಗಳನ್ನು ಪಡೆದುಕೊಂಡಿರುವ 100 ಕೋಟಿಗಿಂತಲೂ ಹಚ್ಚು ವ್ಯಕ್ತಿಗಳ ಮೇಲೆ ಪರಿಣಾಮ ಬೀರಬಹುದು. ಇದರಲ್ಲಿ 12-14 ವರ್ಷದೊಳಗಿನ 4 ಕೋಟಿಗೂ ಹೆಚ್ಚು ಮಕ್ಕಳು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ 37 ಕೋಟಿಗೂ ಹೆಚ್ಚು ಜನರು ಸೇರಿದ್ದಾರೆ. ಮೂಲಗಳ ಪ್ರಕಾರ ವೈಯಕ್ತಿಕ ವಿವರಗಳನ್ನು ಹಂಚಿಕೊಂಡಿದ್ದ ಟೆಲಿಗ್ರಾಂ ಖಾತೆ ಬೆಳಗ್ಗೆಯಿಂದ ನಿಷ್ಕ್ರಿಯವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:Priyanka Gandhi: ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಕ್ಕೆ ಹಿಮಾಚಲ, ಕರ್ನಾಟಕದ ಜನತೆ ತಕ್ಕ ಉತ್ತರ ನೀಡಿದ್ದಾರೆ: ಮಧ್ಯಪ್ರದೇಶದಲ್ಲಿ ಪ್ರಿಯಾಂಕಾ ರಣಕಹಳೆ