ಚಂಡೀಗಢ (ಹರಿಯಾಣ): ಹರಿಯಾಣದ ನೂಹ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರ ಹಾಗೂ ರಾಜಸ್ಥಾನದಲ್ಲಿ ಇಬ್ಬರ ಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಪ್ರಕರಣದಲ್ಲಿ ಬಜರಂಗ ದಳದ ನಾಯಕ, ಗೋರಕ್ಷಕ ದಳದ ಮುಖಂಡ ಮೋನು ಮಾನೇಸರ್ನನ್ನು ಹರಿಯಾಣ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಈಗಾಗಲೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಒಪ್ಪಿಸಿದೆ.
ನುಹ್ ಪೊಲೀಸರು ಇಂದು ಐಟಿ ಕಾಯ್ದೆಯಡಿ ಮೋನು ಮಾನೇಸರ್ನನ್ನು ಬಂಧಿಸಿದ್ದಾರೆ. ಬಿಗಿ ಭದ್ರತೆಯ ನಡುವೆ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಮೋನು ಮಾನೇಸರ್ ಪರ ವಕೀಲ ಸೋಮನಾಥ್ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ:ಹರಿಯಾಣ: ವಿಎಚ್‌ಪಿ ಯಾತ್ರೆಗಿಲ್ಲ ಅನುಮತಿ, ನೂಹ್ ಜಿಲ್ಲೆಯಲ್ಲಿ ಬಿಗಿ ಭದ್ರತೆ, ಸೆಕ್ಷನ್ 144 ಜಾರಿ...
ಫೆಬ್ರವರಿ 15ರಂದು ರಾಜಸ್ಥಾನದ ಭರತ್‌ಪುರ ಜಿಲ್ಲೆಯ ನಿವಾಸಿಗಳಾದ ನಾಸಿರ್ (25), ಜುನೈದ್ (35) ಮೇಲೆ ಗೋರಕ್ಷಕರು ದಾಳಿ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದರ ಮರುದಿನ ಹರಿಯಾಣದ ಭಿವಾನಿ ಜಿಲ್ಲೆಯ ಲೋಹರು ಸಮೀಪ ಕಾರಿನೊಳಗೆ ಸುಟ್ಟ ಸ್ಥಿತಿಯಲ್ಲಿ ಇವರು ದೇಹಗಳು ಪತ್ತೆಯಾಗಿದ್ದವು. ಈ ಘಟನೆಯಲ್ಲಿ ಮನೇಸರ್ ಪ್ರಮುಖ ಎಂಬ ಶಂಕೆ ವ್ಯಕ್ತವಾಗಿತ್ತು.
ಈ ಕುರಿತು ರಾಜಸ್ಥಾನದ ಭರತ್‌ಪುರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಚವಾ ಪ್ರತಿಕ್ರಿಯಿಸಿ, ಮೋನು ಮಾನೇಸರ್ ಬಂಧನದ ಬಗ್ಗೆ ಹರಿಯಾಣ ಪೊಲೀಸರಿಂದ ಮಾಹಿತಿ ಸಿಕ್ಕಿದೆ. ಅಲ್ಲಿನ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನಮಗೆ ಹಸ್ತಾಂತರ ಪ್ರತಿಕ್ರಿಯೆ ಶುರುವಾಗಲಿದೆ ಎಂದು ತಿಳಿಸಿದ್ದಾರೆ.