ಜೈಪುರ(ರಾಜಸ್ಥಾನ):ಕುವೈತ್‌ನಿಂದ 192 ಮೆಟ್ರಿಕ್ ಟನ್ ಹಸುವಿನ ಸಗಣಿ ಬೇಡಿಕೆ ಪಡೆದಿರುವುದಾಗಿ ಭಾರತೀಯ ಸಾವಯವ ರೈತ ಉತ್ಪಾದಕರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಅತುಲ್ ಗುಪ್ತಾ ಈಟಿವಿ ಭಾರತಕ್ಕೆ ತಿಳಿಸಿದರು.
ಕಸ್ಟಮ್ಸ್ ಇಲಾಖೆಯ ಮೇಲ್ವಿಚಾರಣೆಯಲ್ಲಿ ಇಲ್ಲಿನ ಟೊಂಕ್ ರಸ್ತೆಯಲ್ಲಿರುವ ಶ್ರೀಪಿಂಜ್ರಾಪೋಲ್ ಗೌಶಾಲಾದ ಸನ್‌ರೈಸ್ ಆರ್ಗ್ಯಾನಿಕ್ ಪಾರ್ಕ್‌ನಲ್ಲಿ ನೈಸರ್ಗಿಕ ಗೊಬ್ಬರವಾದ ಹಸುವಿನ ಸಗಣಿಯ ಪ್ಯಾಕೇಜಿಂಗ್ ಮಾಡಲಾಗಿದೆ. ಮೊದಲ ಸರಕು ಜೂನ್ 15ರಂದು ಕನಕಪುರ ರೈಲು ನಿಲ್ದಾಣದಿಂದ ಹೊರಡಲಿದ್ದು, ಅಲ್ಲಿಂದ ಗುಜರಾತ್‌ನ ಮುಂದ್ರಾ ಬಂದರನ್ನು ತಲುಪಿ ನಂತರ ಕುವೈತ್‌ಗೆ ರವಾನೆಯಾಗಲಿದೆ.
ಪ್ರಾಣಿ ಉತ್ಪನ್ನಗಳ ರಫ್ತು ಭಾರತೀಯ ಕೃಷಿ ಕ್ಷೇತ್ರಕ್ಕೆ ಪ್ರಮುಖ ಕೊಡುಗೆಯಾಗಿದೆ. ಪ್ರಾಣಿ ಉತ್ಪನ್ನಗಳ ರಫ್ತುಗಳಲ್ಲಿ ಮಾಂಸ, ಕೋಳಿ ಉತ್ಪನ್ನಗಳು, ಪ್ರಾಣಿಗಳ ಚರ್ಮ, ಹಾಲು ಮತ್ತು ಹಾಲಿನ ಉತ್ಪನ್ನಗಳು ಮತ್ತು ಜೇನುತುಪ್ಪ ಸೇರಿವೆ. 2020-21ರಲ್ಲಿ ಭಾರತದಲ್ಲಿ ಪ್ರಾಣಿ ಉತ್ಪನ್ನಗಳ ರಫ್ತು 27,155.56 ಕೋಟಿ ರೂ. ಇತ್ತೀಚೆಗೆ, ಸಾವಯವ ಗೊಬ್ಬರಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿರುವ ಕಾರಣ ಹಸುವಿನ ಸಗಣಿಯನ್ನೂ ರಫ್ತು ಮಾಡಲಾಗುತ್ತಿದೆ.