ಪುಣೆ (ಮಹಾರಾಷ್ಟ್ರ): ಹನ್ನೆರಡು ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಕೊವೊವ್ಯಾಕ್ಸ್ ಲಭ್ಯವಿದೆ ಎಂದು ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ ಸ್ಪಷ್ಟಪಡಿಸಿದ್ದಾರೆ. 'ವಯಸ್ಕರಿಗೆ ಕೊವೊವ್ಯಾಕ್ಸ್ ಲಭ್ಯವಿದೆಯೇ? ಎಂದು ಬಹಳಷ್ಟು ಮಂದಿ ಕೇಳಿದ್ದಾರೆ. ಇದಕ್ಕೆ ಉತ್ತರ ಹೌದು. ಇದು 12 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಭ್ಯ' ಎಂದು ಟ್ವೀಟ್ ಮಾಡಿದ್ದಾರೆ.
ಈಗ ಭಾರತದಲ್ಲಿ ಕೊವೊವ್ಯಾಕ್ಸ್ (ನೊವಾವ್ಯಾಕ್ಸ್) ಮಕ್ಕಳಿಗೂ ಲಭ್ಯವಿದೆ. ದೇಶದಲ್ಲೇ ತಯಾರಿಸಲಾದ ಏಕೈಕ ಲಸಿಕೆ ಇದಾಗಿದ್ದು, ಯುರೋಪ್‌ನಲ್ಲಿಯೂ ಮಾರಾಟವಾಗುತ್ತಿದೆ. ಕೋವಿಡ್ ಸೋಂಕು ವಿರುದ್ಧ 90 ಪ್ರತಿಶತದಷ್ಟು ಪರಿಣಾಮಕಾರಿತ್ವ ಹೊಂದಿದೆ. ಇದು ನಮ್ಮ ಮಕ್ಕಳನ್ನು ರಕ್ಷಿಸಲು ಮತ್ತೊಂದು ಲಸಿಕೆಯನ್ನು ಒದಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ಯೋಜನೆ ಎಂದು ಅವರು ತಿಳಿಸಿದ್ದಾರೆ.
12-17 ವಯಸ್ಸಿನವರಿಗೆ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವೊವ್ಯಾಕ್ಸ್ ಕೋವಿಡ್ ಲಸಿಕೆಯನ್ನು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಕಳೆದ ವಾರ ಅನುಮೋದಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ, ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ ಸರ್ಕಾರವು ಕೊವೊವ್ಯಾಕ್ಸ್‌ಗೆ ಅನುಮತಿ ನೀಡಿತ್ತು.
18 ವಯಸ್ಸು ಮೇಲ್ಪಟ್ಟ ಲಸಿಕೆ ಫಲಾನುಭವಿಗಳಿಗೆ CoWIN ಅಪ್ಲಿಕೇಶನ್‌ನಲ್ಲಿ ಕೊವೊವ್ಯಾಕ್ಸ್ ಆಯ್ಕೆ ಲಭ್ಯವಿಲ್ಲ ಎಂದು ಅನೇಕರು ಟ್ವಿಟರ್ನಲ್ಲಿ ದೂರಿದ್ದಾರೆ. ಈ ವಯಸ್ಸಿನ ಟ್ಯಾಬ್ ಅನ್ನು ಆಯ್ಕೆ ಮಾಡಿದರೆ ಕೋವಿನ್ ಕೊವೊವ್ಯಾಕ್ಸ್ ಆಯ್ಕೆಯಾಗಿ ತೋರಿಸುವುದಿಲ್ಲ ಎಂದು ಬಳಕೆದಾರರೊಬ್ಬರು ಹೇಳಿದ್ದರು. ಇನ್ನೊಬ್ಬ ಬಳಕೆದಾರರು, CoWIN ಅಪ್ಲಿಕೇಶನ್‌ನ ಸ್ಕ್ರೀನ್‌ಶಾಟ್ ಪೋಸ್ಟ್ ಮಾಡಿ, ಇದನ್ನು ಪರಿಶೀಲಿಸಿ. ನಾವು CoWIN ಅಪ್ಲಿಕೇಶನ್‌ನಲ್ಲಿ 18 ಮತ್ತು ಮೇಲಿನ ಆಯ್ಕೆಯನ್ನು ಆರಿಸಿದಾಗ, ಸ್ವಯಂಚಾಲಿತವಾಗಿ ಕೊವೊವ್ಯಾಕ್ಸ್ ಆಯ್ಕೆ ಮರೆಯಾಗುತ್ತದೆ. ಇತರ 4 ಆಯ್ಕೆಗಳಾದ ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್, ಝಿಕೋವ್-ಡಿ ಮಾತ್ರ ಹೈಲೈಟ್ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ದೇಶದಲ್ಲಿ 3,275 ಕೋವಿಡ್ ಕೇಸ್ ಪತ್ತೆ; ಹೊಸ ತಳಿಗಳಿಗೂ ವ್ಯಾಕ್ಸಿನ್ ರಾಮಬಾಣ