ನವದೆಹಲಿ: ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ಆದೇಶ ಬಾರದ ಕಾರಣ ಮುಂದಿನ ವಾರದಿಂದ ಕೋವಿಶೀಲ್ಡ್ ಲಸಿಕೆ ಉತ್ಪಾದನೆಯನ್ನು ಶೇ.50 ರಷ್ಟು ಕಡಿತಗೊಳಿಸಲು ನಿರ್ಧರಿಸಿದ್ದೇವೆ ಎಂದು ಅದಾರ್ ಪೂನಾವಾಲಾ ಹೇಳಿದ್ದಾರೆ.
ಈ ಬಗ್ಗೆ ರಾಷ್ಟ್ರೀಯ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ದೇಶಕ್ಕೆ ದೊಡ್ಡ ಪ್ರಮಾಣದ ಕೋವಿಡ್ ಲಸಿಕೆ ದಾಸ್ತಾನು ಅಗತ್ಯವಿದ್ದರೆ ಹೆಚ್ಚುವರಿ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಸರ್ಕಾರ ಬಯಸುತ್ತದೆ. ಈ ಬಗ್ಗೆ ಯಾವುದೇ ಆದೇಶವಿಲ್ಲದ ಹಿನ್ನೆಲೆಯಲ್ಲಿ ಲಸಿಕೆ ಉತ್ಪಾದನೆಯನ್ನು ಕಡಿತಗೊಳಿಸಲಿದ್ದೇವೆ. ಸರ್ಕಾರ ಸೂಚಿಸಿದರೆ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯವನ್ನು ಕಾಪಾಡಿಕೊಳ್ಳುತ್ತೇವೆ ಎಂದರು.
ಹೆಚ್ಚಿನ ಅಪಾಯ ತೆಗೆದುಕೊಳ್ಳದೆ 20 ರಿಂದ 30 ಮಿಲಿಯನ್ ಡೋಸ್ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಸಂಗ್ರಹಿಸುವುದಾಗಿ ಕೇಂದ್ರ ಹೇಳಿದೆ. ಪರವಾನಗಿ ಪಡೆದ ತಕ್ಷಣ ಹೆಚ್ಚಿನ ದರದಲ್ಲಿ ಇದನ್ನು ಉತ್ಪಾದಿಸಬಹುದು ಎಂದು ಅವರು ತಿಳಿಸಿದರು.
ಕೋವಿಡ್ ರೂಪಾಂತರಿ ತಳಿ ಒಮಿಕ್ರಾನ್ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಮಾತನಾಡಿರುವ ಪೂನಾವಾಲಾ, ಲ್ಯಾನ್ಸೆಟ್ ವಿಜ್ಞಾನ ಜರ್ನಲ್ ಪ್ರಕಾರ, ಅಸ್ಟ್ರಾಜೆನೆಕಾ ಶೇ.80ರಷ್ಟು ಪರಿಣಾಮಕಾರಿಯಾಗಿದೆ. ಅಸ್ತಿತ್ವದಲ್ಲಿರುವ ಲಸಿಕೆಗಳು ಒಮಿಕ್ರಾನ್ ಮೇಲೆ ಹೇಳಿಕೊಳ್ಳುವಂತಹ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಮಾಡರ್ನಾ ಅಧ್ಯಕ್ಷ ಸ್ಟೀಫನ್ ಹಾಗ್ ಹೇಳಿಕೆಯನ್ನು ಅವರು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಸಮರ್ಪಕ ಮಾಹಿತಿಯಿಲ್ಲದೆ ಸ್ಟೀಫನ್ ಹೇಳಿಕೆಯ ಹಿಂದಿನ ಕಾರಣಗಳು ತಿಳಿದಿಲ್ಲ. ಸರಿಯಾದ ಮಾಹಿತಿ ಇಲ್ಲದೆ ಅಂದಾಜು ಮಾಡುವ ಬಗ್ಗೆ ಎಚ್ಚರವಹಿಸುವಂತೆ ಸಲಹೆ ನೀಡಿರುವ ಪೂನಾವಾಲಾ, ಪ್ರಸ್ತುತ ಜಾಗತಿಕ ಲಸಿಕೆ ಪೂರೈಕೆ ಅಗತ್ಯಕ್ಕಿಂತ ಹೆಚ್ಚಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ದೇಶದಲ್ಲಿ 558 ದಿನಗಳಲ್ಲೇ ಅತ್ಯಂತ ಕಡಿಮೆ ಕೋವಿಡ್ ಸೋಂಕಿತರು ಪತ್ತೆ