ನವದೆಹಲಿ: ತನ್ನ ಕೋವಿಶೀಲ್ಡ್ ವ್ಯಾಕ್ಸಿನ್ಗೆ ಹೊಸ ಬೆಲೆ ನಿಗದಿ ಮಾಡಿದ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಸಂಸ್ಥೆಯು, ಭಾರತ ಸರ್ಕಾರದ ನಿರ್ದೇಶನದಂತೆ ರಾಜ್ಯ ಸರ್ಕಾರಗಳಿಗೆ ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್‌ಗೆ 400 ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 600 ರೂ.ಗೆ ನೀಡಲಾಗುತ್ತದೆ ಎಂದು ತಿಳಿಸಿದೆ.
ಇದನ್ನೂ ಓದಿ:ಆಸ್ಪತ್ರೆಯಲ್ಲಿ ಬೆಡ್ಗೆ ಪರದಾಟ, ಚಿತಾಗಾರದಲ್ಲೂ 'ಹೆಣ'ಗಾಟ: ಬೆಂಗಳೂರಿನಲ್ಲಿ ಪರಿಸ್ಥಿತಿ ಗಂಭೀರ
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಸಂಸ್ಥೆಯ ಸಿಇಒ ಆದರ್ ಪೂನವಾಲ್ಲಾ ಅವರು, ನಮ್ಮ ಸಂಸ್ಥೆಯಿಂದ ತಯಾರಿಸಿದ ಕೋವಿಶೀಲ್ಡ್ ಲಸಿಕೆಯನ್ನು ಒಪ್ಪಂದದಂತೆ ಶೇ. 50 ರಷ್ಟು ಕೇಂದ್ರ ಸರ್ಕಾರಕ್ಕೆ ನೀಡಲಾಗುವುದು. ಉಳಿದ ಶೇ. 50 ರಷ್ಟನ್ನು ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೋವಿಶೀಲ್ಡ್ ವ್ಯಾಕ್ಸಿನ್ಗೆ ಹೊಸ ಬೆಲೆ ನಿಗದಿ ಮಾಡಿದ ಸೀರಂ ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಕೋವಿಶೀಲ್ಡ್ ಒಂದು ಡೋಸ್ ಅತ್ಯಂತ ಕಡಿಮೆ ದರದಲ್ಲಿ ಸಿಗಲಿದೆ. ಅಮೆರಿಕದ ಲಸಿಕೆಗಳು ಪ್ರತಿ ಡೋಸ್‌ಗೆ 1,500 ರೂ.ಗಿಂತ ಹೆಚ್ಚಿದ್ದರೆ, ರಷ್ಯಾದ ಮತ್ತು ಚೀನೀ ಲಸಿಕೆಗಳು ಪ್ರತಿ ಡೋಸ್‌ಗೆ 750 ರೂ.ಗಿಂತ ಹೆಚ್ಚಿವೆ ಎಂದು ಎಸ್‌ಐಐ ಹೇಳಿಕೆಯಲ್ಲಿ ತಿಳಿಸಿದೆ.
ನಾಲ್ಕರಿಂದ ಐದು ತಿಂಗಳಲ್ಲಿ ಕೋವಿಶೀಲ್ಡ್ ಪ್ರತಿಯೊಬ್ಬರಿಗೆ ಸಿಗಲಿದೆ ಎಂದು ಭರವಸೆ ನೀಡಿರುವ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಕೇಂದ್ರ ಸರ್ಕಾರ ಸದ್ಯ ಎಲ್ಲಾ ರಾಜ್ಯಗಳಿಗೂ ವ್ಯಾಕ್ಸಿನ್ ಪೂರೈಕೆ ಮಾಡುತ್ತಿದೆ. ಅಗತ್ಯ ಇರುವ ಕೆಲವು ರಾಜ್ಯಗಳು ನೇರವಾಗಿ ವ್ಯಾಕ್ಸಿನ್ಗಳನ್ನು ಕೊಂಡುಕೊಳ್ಳಬಹುದು ಅಂತಾ ತಿಳಿಸಿದೆ.