ಹೈದರಾಬಾದ್: ಉತ್ತರ ಪ್ರದೇಶದ ಗಂಗಾ ನದಿಯಲ್ಲಿ ಕೋವಿಡ್ ರೋಗಿಗಳ ಶವಗಳು ತೇಲಿ ಬಂದ ಪ್ರಕರಣವು ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಪ್ರಕಟವಾಗುತ್ತಿರುವಂತೆಯೇ, ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್-19 ವೈರಸ್ ಹರಡುವುದನ್ನು ತಪ್ಪಿಸುವುದಕ್ಕಾಗಿ 5 ದಿನಗಳವರೆಗೆ ಮನೆ ಮನೆಗೆ ತೆರಳಿ ಕ್ಯಾಂಪೇನ್ ನಡೆಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ಭಾರತದ ಕಚೇರಿ ಇತ್ತೀಚೆಗೆ ಒಂದು ವರದಿಯನ್ನು ಪ್ರಕಟಿಸಿತ್ತು. ಆದರೆ, ಈಟಿವಿ ಭಾರತ್ ಪತ್ರಕರ್ತರು ನಡೆಸಿದ ಕ್ಷೇತ್ರ ಭೇಟಿ ಮತ್ತು ಕೋವಿಡ್ ಪರೀಕ್ಷೆ ಡೇಟಾದ ವಿಶ್ಲೇಷಣೆಯು ಬೇರೆಯದೇ ಕಥೆಯನ್ನು ಹೇಳುತ್ತಿವೆ.
ಭಾರತದ ಡಬ್ಲ್ಯೂಹೆಚ್‌ಒ ಕಚೇರಿಯ ಬೆಂಬಲದೊಂದಿಗೆ ನಡೆಸಿದ 5 ದಿನದ ಟೆಸ್ಟಿಂಗ್ ಕ್ಯಾಂಪೇನ್‌ನಲ್ಲಿ 57 ಜಿಲ್ಲೆಗಳ 97,941 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಸಾರ್ವಜನಿಕವಾಗಿ https://www.covid19india.org/ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಟೆಸ್ಟಿಂಗ್ ಡೇಟಾದ ಪ್ರಕಾರ ಯಾವುದೇ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ. ಅಷ್ಟೇ ಅಲ್ಲ, ಈಟಿವಿ ಭಾರತ್ ಪತ್ರಕರ್ತರು ನಡೆಸಿದ ಕ್ಷೇತ್ರ ಭೇಟಿ ಹಾಗೂ ಗ್ರಾಮದ ನಾಗರಿಕರು, ಆರೋಗ್ಯ ಕಾರ್ಯಕರ್ತರೊಂದಿಗೆ ನಡೆಸಿದ ಸಂದರ್ಶನದಲ್ಲೂ ಯಾವುದೇ ಮಹತ್ತರ ಬೆಳವಣಿಗೆ ಕಂಡು ಬಂದಿಲ್ಲ.
ಡಬ್ಲ್ಯೂಹೆಚ್‌ಒ ಪ್ರಕಟಿಸಿದ್ದ ವರದಿ ಹೇಳಿದ್ದೆ ಬೇರೆ
ಕೋವಿಡ್-19 ತಡೆಯಲು ಸರ್ವಪ್ರಯತ್ನ ನಡೆಸಿದ ಉತ್ತರ ಪ್ರದೇಶ’ ಎಂಬ ಶೀರ್ಷಿಕೆಯಲ್ಲಿ ಡಬ್ಲ್ಯೂಹೆಚ್‌ಒ ಇಂಡಿಯಾ ವರದಿ ಪ್ರಕಟಿಸಿದೆ. ಇದರಲ್ಲಿ ರಾಜ್ಯ ಸರ್ಕಾರವು 1,41,610 ತಂಡಗಳು ಮತ್ತು 21,242 ಮೇಲ್ವಿಚಾರಕರನ್ನು ರಾಜ್ಯ ಆರೋಗ್ಯ ಇಲಾಖೆಯಿಂದ ನಿಯೋಜಿಸಿ, ಎಲ್ಲ ಗ್ರಾಮೀಣ ಪ್ರದೇಶಗಳಲ್ಲೂ ಚಟುವಟಿಕೆ ನಡೆಸಿದೆ ಎಂದು ಉಲ್ಲೇಖಿಸಲಾಗಿದೆ.
ಈ ಚಟುವಟಿಕೆಯ ತರಬೇತಿ ಮತ್ತು ಸೂಕ್ಷ್ಮ ಯೋಜನೆಯಲ್ಲಿ ಉತ್ತರ ಪ್ರದೇಶ ಸರ್ಕಾರಕ್ಕೆ ಡಬ್ಲ್ಯೂಹೆಚ್‌ಒ ಬೆಂಬಲ ನೀಡಿದ್ದು, ತಕ್ಷಣ ಕ್ರಮ ಕೈಗೊಳ್ಳುವುದಕ್ಕೆ ಅನುವಾಗುವಂತೆ ಕ್ಷೇತ್ರ ಕಾರ್ಯಕರ್ತರು ಸರ್ಕಾರಕ್ಕೆ ತಕ್ಷಣವೇ ಮಾಹಿತಿ ಒದಗಿಸಲಿದ್ದಾರೆ ಮತ್ತು ಸನ್ನಿವೇಶವನ್ನು ಗಮನಿಸಲಿದ್ದಾರೆ” ಎಂದು ಮೇ 7ರಂದು ತನ್ನ ವೆಬ್‌ಸೈಟ್‌ನಲ್ಲಿ ಡಬ್ಲ್ಯೂಹೆಚ್‌ಒ ಪ್ರಕಟಿಸಿದ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.
ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ ಹೇಳಿದಂತೆ “ಉದ್ಘಾಟನೆ ದಿನದಂದು, 2,000ಕ್ಕೂ ಹೆಚ್ಚು ಸರ್ಕಾರಿ ತಂಡಗಳನ್ನು ಡಬ್ಲ್ಯೂಹೆಚ್‌ಒ ಕ್ಷೇತ್ರ ಅಧಿಕಾರಿಗಳು ಅವಲೋಕಿಸಿದ್ದಾರೆ ಮತ್ತು ಕನಿಷ್ಠ 10,000 ಕುಟುಂಬಗಳಿಗೆ ಭೇಟಿ ನೀಡಿವೆ” ಎಂದಿದೆ.
ಆದರೆ, ಮೇ 5 ರಿಂದ ಆರಂಭವಾಗಿ ಐದು ದಿನಗಳವರೆಗೆ ನಡೆದ ಕ್ಯಾಂಪೇನ್ ಅವಧಿಯಲ್ಲಿ https://www.covid19india.org/state/UP ವೆಬ್‌ಸೈಟ್‌ನಲ್ಲಿರುವ ಡೇಟಾದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಕಂಡುಬರಲಿಲ್ಲ.
5 ದಿನದ ಕ್ಯಾಂಪೇನ್ ಹಿಂದಿನ ರಹಸ್ಯ
ವಾಸ್ತವದಲ್ಲಿ, ಡಬ್ಲ್ಯೂಹೆಚ್‌ಒ ಬೆಂಬಲಿಸಿದ 5 ದಿನದ ಕ್ಯಾಂಪೇನ್ ಅವಧಿಗಿಂತ ಉತ್ತರ ಪ್ರದೇಶದಲ್ಲಿ ಪ್ರತಿನಿತ್ಯದ ಕೋವಿಡ್ ಟೆಸ್ಟಿಂಗ್ ಮೇ ತಿಂಗಳದ ಆರಂಭದಲ್ಲೇ ಅತಿ ಹೆಚ್ಚು ನಡೆಯುತ್ತಿತ್ತು.
ಕೋವಿಡ್-19 ಭಾರತದ ವೆಬ್‌ಸೈಟ್ ಪ್ರಕಾರ, ಮೇ 1 ರಂದು 2,66,619 ಟೆಸ್ಟ್‌ಗಳನ್ನು ಉತ್ತರ ಪ್ರದೇಶದಲ್ಲಿ ಮಾಡಲಾಗಿದೆ. ಮೇ 2 ರಂದು 2,97,385 ಟೆಸ್ಟ್‌ಗಳು ಹಾಗೂ ಮೇ 3 ರಂದು 2,29,613 ಮತ್ತು ಮೇ 4 ರಂದು 2,08,564 ಟೆಸ್ಟ್‌ಗಳನ್ನು ಮಾಡಲಾಗಿದೆ.
ಈ ಪ್ರತಿ 1,41,610 ತಂಡವೂ ದಿನಕ್ಕೆ ಕನಿಷ್ಠ ಎರಡು ಟೆಸ್ಟ್‌ಗಳನ್ನು ಮಾಡಿದ್ದರೂ, ಐದು ದಿನದ ಚಟುವಟಿಕೆ ಅವಧಿಯಲ್ಲಿ ಪ್ರತಿ ದಿನದ ಟೆಸ್ಟ್‌ಗಳ ಸಂಖ್ಯೆ 2,83,220 ಆಗಬೇಕಿತ್ತು. ಆಗ ಪ್ರತಿ ದಿನದ ಟೆಸ್ಟ್‌ಗಳ ಸಂಖ್ಯೆಯು 2,30,000 ಇಂದ 5,10,000 ಆಗಬೇಕಾಗಿತ್ತು.
ಟೆಸ್ಟ್‌ಗಳ ಅಸಲಿ ಮುಖ ಇದು
ಆದರೆ, ಸೈಟ್‌ನಲ್ಲಿ ಲಭ್ಯವಿರುವ ಸೈಟ್‌ಗಳ ಪ್ರಕಾರ, ಆರಂಭದ ದಿನ ಮೇ 5 ರಂದು ಉತ್ತರ ಪ್ರದೇಶದಲ್ಲಿ 2,32,038 ಟೆಸ್ಟ್‌ಗಳನ್ನು ಮಾಡಲಾಗಿದೆ. ಮುಂದಿನ ನಾಲ್ಕು ದಿನಗಳಲ್ಲಿ, ಮೇ 6 ರಂದು 2,26,112, ಮೇ 7 ರಂದು 2,41,403, ಮೇ 8 ರಂದು 2,24,529 ಹಾಗೂ ಮೇ 9 ರಂದು 2,29,595 ಟೆಸ್ಟ್‌ಗಳನ್ನು ನಡೆಸಿದೆ.
ಮೇ 5 ರಿಂದ ಮೇ 9ರ ವರೆಗೆ, ಒಟ್ಟಾರೆ 11,52,000 ಟೆಸ್ಟ್‌ಗಳನ್ನು ಉತ್ತರ ಪ್ರದೇಶದಲ್ಲಿ ಮಾಡಲಾಗಿದೆ. ದಿನಕ್ಕೆ ಸರಾಸರಿ 2,30,000. ಆದರೆ ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಟೆಸ್ಟಿಂಗ್ ಚಟುವಟಿಕೆಯನ್ನು ಆರಂಭಿಸುವುದಕ್ಕೂ ಮೊದಲು, ತಿಂಗಳದ ಮೊದಲ ಎರಡು ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ದಿನಕ್ಕೆ 2,82,000 ಟೆಸ್ಟ್‌ಗಳನ್ನು ನಡೆಸಲಾಗುತ್ತಿತ್ತು.
ಡಬ್ಲ್ಯೂಹೆಚ್‌ಒ ಲೇಖನದಲ್ಲಿ ಹೇಳಿರುವಂತೆ ಪ್ರತಿ ಮಾನಿಟರಿಂಗ್ ತಂಡವೂ ಇಬ್ಬರು ಸದಸ್ಯರನ್ನು ಹೊಂದಿದೆ. ಇವರು ಗ್ರಾಮೀಣ ಪ್ರದೇಶಗಳು ಮತ್ತು ಕುಗ್ರಾಮಗಳಲ್ಲಿನ ಮನೆಗಳಿಗೆ ಭೇಟಿ ನೀಡಿ, ರ್‍ಯಾಪಿಡ್ ಆಂಟಿಜೆನ್ ಟೆಸ್ಟ್ (ಆರ್‌ಎಟಿ) ಕಿಟ್‌ಗಳನ್ನು ಬಳಸಿ ಕೋವಿಡ್ ಗುಣಲಕ್ಷಣ ಇರುವ ಎಲ್ಲರಿಗೂ ಪರೀಕ್ಷೆ ನಡೆಸಲಿದ್ದಾರೆ. ಪಾಸಿಟಿವ್ ಬಂದವರಿಗೆ ತಕ್ಷಣವೇ ಐಸೋಲೇಟ್ ಮಾಡಲಾಗುತ್ತದೆ ಮತ್ತು ರೋಗವನ್ನು ನಿರ್ವಹಿಸುವ ಬಗ್ಗೆ ಸಲಹೆಯ ಜೊತೆಗೆ ಔಷಧದ ಕಿಟ್ ನೀಡಲಾಗುತ್ತದೆ.
ಪಾಸಿಟಿವ್ ಕಂಡುಬಂದ ಎಲ್ಲರೊಂದಿಗೆ ಸಂಪರ್ಕ ಹೊಂದಿರುವವರನ್ನೂ ಕ್ವಾರಂಟೈನ್ ಮಾಡಲಾಗುತ್ತದೆ ಮತ್ತು ರ್‍ಯಾಪಿಡ್ ರೆಸ್ಪಾನ್ಸ್ ತಂಡವು ಆರ್‌ಟಿ-ಪಿಸಿಆರ್ ಬಳಸಿ ಮನೆಯಲ್ಲೇ ಪರೀಕ್ಷೆ ಮಾಡಲಾಗುತ್ತದೆ.
ಈಟಿವಿ ಭಾರತ್‌ನಿಂದ ವಾಸ್ತವ ಚಿತ್ರಣ
ಡಬ್ಲ್ಯೂಹೆಚ್‌ಒ ಲೇಖನ ಪ್ರಕಟಿಸುತ್ತಿದ್ದಂತೆಯೇ ಉತ್ತರ ಪ್ರದೇಶದಲ್ಲಿನ ಈಟಿವಿ ಭಾರತ್ ವರದಿಗಾರರು ವಿವಿಧ ಗ್ರಾಮಗಳಲ್ಲಿನ ನಿವಾಸಿಗಳು, ಗ್ರಾಮದ ಮುಖಂಡರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಿದ್ದಾರೆ. ಬಾರಾಬಂಕಿ ಜಿಲ್ಲೆಯ ಸಿಪಾಹಿಯಾ ಗ್ರಾಮದ ಬಗ್ಗೆ ಡಬ್ಲ್ಯೂಹೆಚ್ಒ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇತರ ಜಿಲ್ಲೆಗಳಿಗೆ ಭೇಟಿ ನೀಡಿರುವುದರ ಜೊತೆಗೆ, ಬಾರಾಬಂಕಿ ಜಿಲ್ಲೆಯಲ್ಲಿನ ಸಿಪಾಹಿಯಾ ಗ್ರಾಮಕ್ಕೂ ಈಟಿವಿ ಭಾರತ್ ವರದಿಗಾರರ ತಂಡ ತೆರಳಿತು.
ಡಬ್ಲ್ಯೂಹೆಚ್‌ಒ ತಂಡ ಮತ್ತು ಆರೋಗ್ಯ ಕಾರ್ಯಕರ್ತರು ಸಿಪಾಹಿಯಾ ಗ್ರಾಮಕ್ಕೆ ಭೇಟಿ ನೀಡಿರುವುದನ್ನು ಬಾರಾಬಂಕಿಯಲ್ಲಿನ ಸ್ಥಳೀಯರು ಖಚಿತಪಡಿಸಿದ್ದಾರೆ. ಈ ಭೇಟಿಯು ಮನೆ ಮನೆಗೂ ಟೆಸ್ಟಿಂಗ್ ಮಾಡುವುದಕ್ಕೂ ಹೆಚ್ಚಾಗಿ ಜಾಗೃತಿ ಕ್ಯಾಂಪೇನ್ ರೀತಿ ಇತ್ತು.
ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಹಾಗೂ ತಂಡ ಗ್ರಾಮಕ್ಕೆ ಭೇಟಿ ನೀಡಿತ್ತು ಮತ್ತು ಯಾರಿಗಾದರೂ ಜ್ವರ, ಕೆಮ್ಮು ಮತ್ತು ಶೀತ ಕಾಣಿಸಿಕೊಂಡಿದೆಯೇ ಎಂದು ಕೇಳಿತು. ಕೆಲವು ಮನೆಗಳಿಗೆ ಅವರು ಭೇಟಿ ನೀಡಿದರು. ಆದರೆ ಯಾವುದೇ ಟೆಸ್ಟ್ ಮಾಡಿಲ್ಲ ಎಂದು ಸ್ಥಳೀಯ ಸುಮೇರಿ ಲಾಲ್ ಹೇಳಿದ್ದಾರೆ.
ಸಿಪಾಹಿಯಾ ಗ್ರಾಮದ ಆಶಾ ಕಾರ್ಯಕರ್ತೆ ನೀಲಂ ಹೇಳುವಂತೆ, ಐದು ದಿನದ ಕ್ಯಾಂಪೇನ್ ಅನ್ನು ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಗಿತ್ತು. ಟೆಸ್ಟ್ ಮಾಡುವಾಗ ನನಗೆ ತಿಳಿಸಲಾಗುತ್ತಿತ್ತು. ಆಗ ನಾವು ಗ್ರಾಮದ ಜನರನ್ನು ಕರೆದು, ಟೆಸ್ಟ್ ಮಾಡಿಸುತ್ತಿದ್ದೆವು ಎಂದಿದ್ದಾರೆ.