ಕೋಲ್ಕತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಲಸಿಕೆ ಪೂರೈಕೆ ಹೆಚ್ಚಿಸದಿದ್ದರೆ ಕೋವಿಡ್ ಪರಿಸ್ಥಿತಿ ಭೀಕರವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅತಿ ಹೆಚ್ಚಿನ ಜನಸಂಖ್ಯಾ ಸಾಂದ್ರತೆಯ ಹೊರತಾಗಿಯೂ ರಾಜ್ಯವು ಕಡಿಮೆ ಪ್ರಮಾಣದ ಲಸಿಕೆಗಳನ್ನು ಪಡೆಯುತ್ತಿದೆ ಎಂದು ಅವರು ಆರೋಪಿಸಿದರು ಮತ್ತು ಪೂರೈಕೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿದರು. ಎಲ್ಲ ಅರ್ಹ ಜನರನ್ನು ಒಳಗೊಳ್ಳಲು ರಾಜ್ಯಕ್ಕೆ ಸುಮಾರು 14 ಕೋಟಿ ಡೋಸ್ ಕೋವಿಡ್ ಲಸಿಕೆಗಳು ಬೇಕಾಗುತ್ತವೆ ಎಂದು ಅವರು ಹೇಳಿದರು.
ಪ್ರಸ್ತುತ, ನಾವು ದಿನಕ್ಕೆ 4 ಲಕ್ಷ ಡೋಸ್‌ಗಳನ್ನು ನೀಡುತ್ತಿದ್ದೇವೆ ಮತ್ತು ದಿನಕ್ಕೆ 11 ಲಕ್ಷ ಡೋಸ್‌ಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದೇವೆ. ಆದರೂ, ಅತಿ ಹೆಚ್ಚಿನ ಜನಸಂಖ್ಯಾ ಸಾಂದ್ರತೆ ಮತ್ತು ಹೆಚ್ಚಿನ ನಗರೀಕರಣದ ಹೊರತಾಗಿಯೂ ನಾವು ಕಡಿಮೆ ಸಂಖ್ಯೆಯ ಡೋಸ್‌ಗಳನ್ನು ಪಡೆಯುತ್ತಿದ್ದೇವೆ ಎಂದು ಬ್ಯಾನರ್ಜಿ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.