ನವದೆಹಲಿ: ಕೋವಿಡ್ ಸಾಂಕ್ರಾಮಿಕ ಎರಡು ವರ್ಷಗಳ ಕಾಲ ನಮ್ಮನ್ನು ಕಾಡಿದೆ. ಈ ಎರಡು ವರ್ಷಗಳಲ್ಲಿ ಎಲ್ಲಾ ದೇಶಗಳಂತೆ ಭಾರತದ ಆರ್ಥಿಕತೆಯ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗಿದೆ. ರಾಜ್ಯಗಳ ಹಣಕಾಸಿನ ಸ್ಥಿತಿಗತಿ ಪಾತಾಳಕ್ಕೆ ಇಳಿದಿದೆ. ಸಾಕಷ್ಟು ಆದಾಯವಿಲ್ಲದೇ, ಆರೋಗ್ಯವಲಯದಲ್ಲಿ ಸಾಕಷ್ಟು ಹೂಡಿಕೆ ಮಾಡಬೇಕಾದ ಅಗತ್ಯತೆ ಇದ್ದ ಕಾರಣದಿಂದ ವಿತ್ತೀಯ ಕೊರತೆ ಕಾಣಿಸಿಕೊಂಡಿದೆ. ಲಭ್ಯವಿರುವ ಆದಾಯಕ್ಕಿಂತ ಹೆಚ್ಚು ವೆಚ್ಚ ಮಾಡಿದರೆ ಅದನ್ನು ಸರಳವಾಗಿ ವಿತ್ತೀಯ ಕೊರತೆ ಎಂದು ಕರೆಯಲಾಗುತ್ತದೆ. ಈ ರೀತಿಯ ವಿತ್ತೀಯ ಕೊರತೆ ದೇಶದ ಸುಮಾರು 18 ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ. ಅಧಿಕಾರಿಗಳು ನೀಡುವ ಮಾಹಿತಿಯಂತೆ ಅತಿ ಹೆಚ್ಚು ಎಂದರೆ ರಾಜ್ಯಗಳು ವಿಧಿಸುವ ಜಿಡಿಪಿಯ ಶೇಕಡಾ 4ರಷ್ಟು ವಿತ್ತೀಯ ಕೊರತೆ 2021-22ರ ಹಣಕಾಸು ವರ್ಷದಲ್ಲಿ ಉಂಟಾಗಿದೆ ಎಂಬುದು ಅಧಿಕೃತ ಮಾಹಿತಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞರಾದ ಸೌಮ್ಯ ಕಾಂತಿ ಘೋಷ್ ಅವರು ನಡೆಸಿದ ವಿಶ್ಲೇಷಣೆಯ ಮಾಹಿತಿಯಂತೆ 18 ರಾಜ್ಯಗಳ ಜಿಡಿಪಿಯಲ್ಲಿನ ಸರಾಸರಿ ವಿತ್ತೀಯ ಕೊರತೆಯನ್ನು ಕಳೆದ ಹಣಕಾಸು ವರ್ಷದಲ್ಲಿ 50 ಬಿಪಿಎಸ್‌ನಿಂದ ಶೇಕಡಾ 4ರವರೆಗೆ ಪರಿಷ್ಕರಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ 11 ರಾಜ್ಯಗಳು ತಮ್ಮ ವಿತ್ತೀಯ ಕೊರತೆಯನ್ನು ಹೇಳಿಕೊಂಡಿದ್ದವು.ಈಗ ತಮ್ಮ ಬಜೆಟ್ ಗುರಿಗಿಂತ ಸಮನಾಗಿ ಅಥವಾ ಕಡಿಮೆ ವೆಚ್ಚವನ್ನು ಇರಿಸಿಕೊಳ್ಳಲು ಸಮರ್ಥವಾಗಿದ್ದರೂ ಏಳು ರಾಜ್ಯಗಳ ವಿತ್ತೀಯ ಕೊರತೆಯು ಬಜೆಟ್ ಗುರಿಯನ್ನು ಮೀರಿದೆ ಎಂದು ವಿಶ್ಲೇಷಣೆ ತೋರಿಸುತ್ತದೆ.
ರಾಜ್ಯಗಳ ಒಟ್ಟು ವಿತ್ತೀಯ ಕೊರತೆಯು ರೂ. 7.2 ಲಕ್ಷ ಕೋಟಿ: ಬಿಹಾರದ ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇಕಡಾ 8.3ರಷ್ಟಿದೆ. ಅಂದರೆ ಬಜೆಟ್ ಅಂದಾಜಿಗಿಂತ 54,327 ಕೋಟಿ ರೂಪಾಯಿ ಹೆಚ್ಚಿಗೆ ವೆಚ್ಚ ಮಾಡಲಾಗಿದೆ. ಅಸ್ಸಾಂನ ವಿತ್ತೀಯ ಕೊರತೆಯು ಶೇಕಡಾ 4.5ರಷ್ಟಿದೆ. ಅಂದರೆ ಅದು ಘೋಷಿಸಿದ್ದ ಆದಾಯಕ್ಕಿಂತ 21,935 ಕೋಟಿ ಹೆಚ್ಚಿಗೆ ವೆಚ್ಚ ಮಾಡಿದೆ. ಈ ಎರಡು ರಾಜ್ಯಗಳಲ್ಲಿ, ವಿತ್ತೀಯ ಕೊರತೆಯು ಗಮನಾರ್ಹವಾಗಿ ಏರಿಕೆಯಾಗಿದೆ. ಅರುಣಾಚಲ ಪ್ರದೇಶ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ ಮತ್ತು ರಾಜಸ್ಥಾನ ಕಳೆದ ಹಣಕಾಸು ವರ್ಷದಲ್ಲಿ ತಮ್ಮ ಬಜೆಟ್ ಗುರಿಗಿಂತ ಹೆಚ್ಚಿನ ವಿತ್ತೀಯ ಕೊರತೆಯನ್ನು ವರದಿ ಮಾಡಿದೆ. ಈ ತಿಂಗಳು ಆರಂಭವಾದ ಪ್ರಸಕ್ತ ಹಣಕಾಸು ವರ್ಷದಲ್ಲಿ, ರಾಜ್ಯಗಳ ಕಡಿಮೆ ವಿತ್ತೀಯ ಕೊರತೆ ಶೇಕಡಾ 3.4ರಷ್ಟಿದೆ. 18 ರಾಜ್ಯಗಳ ಒಟ್ಟು ವಿತ್ತೀಯ ಕೊರತೆಯು 7.2 ಲಕ್ಷ ಕೋಟಿ ರೂಪಾಯಿ ಇದೆ.ಕೆಲವು ರಾಜ್ಯಗಳಲ್ಲಿ ಹಣಕಾಸಿನ ಶಿಸ್ತಿಲ್ಲದ ಕಾರಣದಿಂದ ಆದಾಯ ಸಂಗ್ರಹಣೆ ಕಾರ್ಯ ಕಷ್ಟಕರವಾಗಿದೆ.