ನವದೆಹಲಿ: ಚೀನಾದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಜನ ಕೋವಿಡ್-19 ಬಗ್ಗೆ ಜಾಗರೂಕರಾಗಿರಬೇಕು ಎಂದು ದೇಶದ ಹಿರಿಯ ಆರೋಗ್ಯ ತಜ್ಞರು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ದೇಶದ ಆರೋಗ್ಯ ವ್ಯವಸ್ಥೆಯು ಸನ್ನದ್ಧವಾಗಿರುವುದರಿಂದ ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಕೋವಿಡ್19 ವರ್ಕಿಂಗ್ ಗ್ರೂಪ್ ಎನ್‌ಟಿಎಜಿಐ ಅಧ್ಯಕ್ಷ ಡಾ ಎನ್‌ಕೆ ಅರೋರಾ ಈ ಹೇಳಿಕೆ ನೀಡಿದ್ದಾರೆ.
ಚೀನಾದ ಪರಿಸ್ಥಿತಿಯ ಬಗ್ಗೆ ನಾವು ನಿಕಟವಾಗಿ ನಿಗಾ ಇಡುವುದು ಒಂದು ಪ್ರಮುಖ ವಿಷಯವಾಗಿದೆ. ಆದರೂ ಭಯಪಡುವ ಅಗತ್ಯವಿಲ್ಲ, ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ವ್ಯವಸ್ಥೆಯು ತುಂಬಾ ಜಾಗರೂಕವಾಗಿದೆ. ನಾವು ಕೂಡ ಜಾಗರೂಕರಾಗಿರಬೇಕು. ಜೀನೋಮಿಕ್ ಕಣ್ಗಾವಲಿಗೆ ಸಂಬಂಧಿಸಿದಂತೆ, ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳ ಜೀನೋಮಿಕ್ ಕಣ್ಗಾವಲು ಮಾಡುತ್ತಿರುವುದು ಇದರ ಪ್ರಮುಖ ಭಾಗವಾಗಿದೆ ಹೇಳಿದರು.
ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ಭಾರತದ ಸನ್ನದ್ಧತೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಡಾ. ಅರೋರಾ, ಹೊಸ ಕೋವಿಡ್ ಉಪ-ತಳಿಯ ಹೊರಹೊಮ್ಮುವಿಕೆಯ ಸಂದರ್ಭದಲ್ಲಿ ದೇಶವು ಸೂಕ್ತ ಕ್ರಮ ತೆಗೆದುಕೊಳ್ಳಬಹುದು ಎಂದು ಹೇಳಿದರು.