ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 5,880 ಹೊಸ ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿದ್ದು, 14 ಮಂದಿ ಮೃತಪಟ್ಟಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಂತೆ, ಪ್ರಸ್ತುತ ದೇಶದಲ್ಲಿ 35,199 ಸಕ್ರಿಯ ಪ್ರಕರಣಗಳಿವೆ. ದೆಹಲಿ, ಹಿಮಾಚಲ ಪ್ರದೇಶದಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ. ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಮತ್ತು ರಾಜಸ್ಥಾನದಿಂದ ಒಬ್ಬೊಬ್ಬರು ಮತ್ತು ಕೇರಳದಿಂದ ಎರಡು ಸಾವು ವರದಿಯಾಗಿದೆ. ದೈನಂದಿನ ಸಕ್ರಿಯ ಸೋಂಕು ದರ 6.91 ರಷ್ಟಿದೆ. ವಾರದ ಸೋಂಕು ದರ ಶೇ 3.67 ರಷ್ಟಿದೆ.
ಹಲವು ರಾಜ್ಯ ಸರ್ಕಾರಗಳು ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಸೌಲಭ್ಯಗಳನ್ನು ಪರೀಕ್ಷಿಸಲು ಇಂದು ಅಣಕು ಕಾರ್ಯಾಚರಣೆ ನಡೆಸುತ್ತಿವೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ರಾಷ್ಟ್ರ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿ ಅಣಕು ಕಸರತ್ತು ಪರಿಶೀಲಿಸಿದರು. ತಮಿಳುನಾಡು ಆರೋಗ್ಯ ಸಚಿವ ಸುಬ್ರಮಣಿಯನ್ ಚೆನ್ನೈನ ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ನಿಭಾಯಿಸಲು ತೆಗೆದುಕೊಂಡ ತುರ್ತು ಕ್ರಮಗಳನ್ನು ಪರಿಶೀಲಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ತಮಿಳುನಾಡಿನಲ್ಲಿ 350 ಅಥವಾ ಅದಕ್ಕಿಂತ ಕಡಿಮೆ ಕೋವಿಡ್ ಸೋಂಕಿನ ಪ್ರಕರಣಗಳಿವೆ. ಜನರು ಭಯಪಡುವ ಅಗತ್ಯವಿಲ್ಲ. ಮೂರನೇ ಅಲೆಗೆ ಹೋಲಿಸಿದರೆ 4ನೇ ಅಲೆ ಸೌಮ್ಯ ಪರಿಣಾಮ ಬೀರುತ್ತದೆ ಎಂದರು.