ಮುಂಬೈ:ಕೋವಿಡ್ ಜಂಬೋ ಸೆಂಟರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರದಿಂದ ವಿಚಾರಣೆ ಆರಂಭಿಸಿರುವ ಜಾರಿ ನಿರ್ದೇಶನಾಲಯವು ಎರಡನೇ ದಿನವಾದ ಗುರುವಾರ ಸಹ ತನಿಖೆ ಮುಂದುವರೆಸಿದೆ. ನಿನ್ನೆ ಬೈಕುಲ್ಲಾದಲ್ಲಿರುವ ಮಹಾನಗರ ಪಾಲಿಕೆಯ ಕೇಂದ್ರ ಸಂಗ್ರಹಣೆ ವಿಭಾಗದಲ್ಲಿ ಇಡಿ ಅಧಿಕಾರಿಗಳು ಕೂಲಂಕಷ ತನಿಖೆ ನಡೆಸಿದರು. ದಾಳಿ ವೇಳೆ ಸುಮಾರು 150 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಈ ಪೈಕಿ 100 ಕೋಟಿ ಆಸ್ತಿ ಸಂಜೀವ್ ಜೈಸ್ವಾಲ್ ಹೆಸರಿನಲ್ಲಿದೆ ಎಂದು ಇಡಿ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ ಎಂದು ವರದಿಯಾಗಿದೆ.
ಜಾರಿ ನಿರ್ದೇಶನಾಲಯವು ಮುಂಬೈನ 15 ಸ್ಥಳಗಳಲ್ಲಿ ಜೂನ್ 21 ರಂದು ದಾಳಿ ನಡೆಸಿತ್ತು. ದಾಳಿ ಬಳಿಕ ಐಎಎಸ್ ಅಧಿಕಾರಿ ಸಂಜಯಾ ಜೈಸ್ವಾಲ್ ಅವರನ್ನು ವಿಚಾರಣೆ ನಡೆಸಲಾಗಿತ್ತು. ಈ ಮಧ್ಯೆ ಬುಧವಾರ ನಡೆಸಿದ ದಾಳಿಯಲ್ಲಿ 150 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಇಡಿ ಪತ್ತೆ ಮಾಡಿದ್ದು, ಐಎಎಸ್ ಅಧಿಕಾರಿ ಸಂಜೀವ್ ಜೈಸ್ವಾಲ್ ಹೆಸರಿನಲ್ಲಿದೆ ಎಂದು ಹೇಳಲಾಗುತ್ತಿದೆ.
ಕೋವಿಡ್ ಸೆಂಟರ್ ಹಗರಣ ನಡೆದಾಗ ಜೈಸ್ವಾಲ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಮುನ್ಸಿಪಲ್ ಕಮಿಷನರ್ ಆಗಿದ್ದರು. ಸದ್ಯಕ್ಕೆ 100 ಕೋಟಿ ಆಸ್ತಿ ಹೊಂದಿರುವುದಾಗಿ ಹೇಳಿಕೊಂಡಿರುವ ಸಂಜೀವ್ ಜೈಸ್ವಾಲ್ ಅವರು, ಈ ಹಿಂದೆ ತಮ್ಮ ಹೆಸರಿನಲ್ಲಿ ಕೇವಲ 34 ಕೋಟಿ ಆಸ್ತಿ ಹೊಂದಿದ್ದಾಗಿ ಮಾಹಿತಿ ನೀಡಿದ್ದರು. ಜೊತೆಗೆ, ಈ ಆಸ್ತಿಯನ್ನು ತನ್ನ ಮಾವ ಅಂದರೆ ತನ್ನ ಹೆಂಡತಿಯ ತಂದೆ ನೀಡಿದ್ದಾರೆ. 15 ಕೋಟಿ ರೂಪಾಯಿ ಎಫ್‌ಡಿಯನ್ನೂ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಕೋವಿಡ್ ಸೆಂಟರ್ ಆಸ್ಪತ್ರೆ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಬುಧವಾರ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ಬಾಂದ್ರಾ ಪೂರ್ವದಲ್ಲಿರುವ ಸಂಜೀವ್ ಜೈಸ್ವಾಲ್ ಅವರ ಮನೆಯ ಮೇಲೆ ಸಹ ದಾಳಿ ನಡೆದಿದ್ದು, ಸಂಜೀವ್ ಜೈಸ್ವಾಲ್ ಪ್ರಸ್ತುತ MHADA ಉಪಾಧ್ಯಕ್ಷರಾಗಿದ್ದಾರೆ. ಕೋವಿಡ್ ಸೆಂಟರ್ ಹಗರಣ ನಡೆದಾಗ ಜೈಸ್ವಾಲ್ ಮುಂಬೈ ಮಹಾನಗರ ಪಾಲಿಕೆಯಲ್ಲಿ ಹೆಚ್ಚುವರಿ ಮುನ್ಸಿಪಲ್ ಕಮಿಷನರ್ ಆಗಿದ್ದರು. ಹಾಗಾಗಿ, ಅವರನ್ನೂ ವಿಚಾರಣೆ ನಡೆಸಲಾಗುತ್ತಿದೆ. ಇದೀಗ, ಇಡಿ ನಡೆಸಿದ ದಾಳಿಯಲ್ಲಿ ಪೊಲೀಸರ ಕೈಗೆ 24 ದಾಖಲೆಗಳು ಸಿಕ್ಕಿವೆ. ಅಲ್ಲದೇ, 15 ಕೋಟಿಗೂ ಅಧಿಕ ಮೊತ್ತದ ಎಫ್ ಡಿ ದಾಖಲೆಗಳು ಪತ್ತೆಯಾಗಿವೆ. ಈ ದಾಖಲೆಯ ಪ್ರಕಾರ, ಸಂಜೀವ್ ಜೈಸ್ವಾಲ್ ಅವರು 100 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ. ಈ ಆಸ್ತಿಗಳು ಜೈಸ್ವಾಲ್ ಕುಟುಂಬಕ್ಕೆ ಸೇರಿವೆ ಎಂದು ಇಡಿ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ :ED Raid: 10 ಸಾವಿರ ಕೋಟಿ ಹವಾಲ ವ್ಯವಹಾರದ ಶಂಕೆ.. 20ಕ್ಕೂ ಹೆಚ್ಚು ಕಡೆ ಇಡಿ ದಾಳಿ
ಬುಧವಾರ ನಡೆಸಿದ ಶೋಧ ಕಾರ್ಯಚರಣೆ ವೇಳೆ ಪಾಲಿಕೆಯ ಮಾರುಕಟ್ಟೆ ಬೆಲೆಗಿಂತ ಶೇ.30ರಷ್ಟು ಅಧಿಕ ದರದಲ್ಲಿ ಬಾಡಿ ಬ್ಯಾಗ್ ನಲ್ಲಿ ಔಷಧಗಳನ್ನು ಖರೀದಿಸುತ್ತಿರುವ ದಾಖಲೆಗಳು ಇಡಿ ಅಧಿಕಾರಿಗಳಿಗೆ ಸಿಕ್ಕಿವೆಯಂತೆ. ಇದೇ ವೇಳೆ 150 ಕೋಟಿಗೂ ಹೆಚ್ಚು ಮೌಲ್ಯದ ಹೆಚ್ಚು ಸ್ಥಿರಾಸ್ತಿಗಳ 50 ದಾಖಲೆಗಳು, 15 ಕೋಟಿ 68 ಲಕ್ಷ ರೂ.ಗೂ ಅಧಿಕ ಮೊತ್ತದ ಎಫ್‌ಡಿ ಹಾಗೂ 1 ಕೋಟಿ 82 ಲಕ್ಷ ಮೌಲ್ಯದ ಚಿನ್ನಾಭರಣಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್‌ಗಳು, ಎಫ್‌ಡಿಗಳನ್ನು ಅಧಿಕಾರಿಗಳು ಪಡೆದಿದ್ದಾರೆ ಎಂಬ ಮಾಹಿತಿ ಇಡಿ ಮೂಲಗಳಿಂದ ಸಿಕ್ಕಿದೆ.