ನವದೆಹಲಿ: ದೇಶದಲ್ಲಿ ಕೋವಿಡ್ 19 ವೈರಸ್ ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ ಕಂಡುಬರುತ್ತಿದೆ. ಕಳೆದೊಂದು ದಿನದಲ್ಲಿ ಬರೋಬ್ಬರಿ 5,357 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 32,814 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 11ಮಂದಿ ಸಾವನ್ನದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 5,30,965 ಕ್ಕೆ ತಲುಪಿದೆ. ಗುಜರಾತ್ನಲ್ಲಿ ಮೂವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಇಬ್ಬರು ಮತ್ತು ಬಿಹಾರ, ಛತ್ತೀಸ್‌ಗಢ, ಮಹಾರಾಷ್ಟ್ರ, ಒಡಿಶಾ, ಕೇರಳ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆಂದು ಎಂದು ಬೆಳಗ್ಗೆ ನವೀಕರಿಸಿದ ಡೇಟಾದಲ್ಲಿ ತಿಳಿಸಲಾಗಿದೆ. ಇನ್ನು ಕಳೆದೊಂದು ದಿನದಲ್ಲಿ ಪತ್ತೆಯಾದ ಸೋಂಕಿತರು ಸೇರಿದಂತೆ ಇದುವರೆಗೆ 4.47 ಕೋಟಿಗೆ (4,47,56,616) ಮಂದಿಗೆ ಸೋಂಕು ತಗುಲಿದೆ.
ಸದ್ಯಕ್ಕೆ ರಾಷ್ಟ್ರೀಯ ಕೋವಿಡ್ ಚೇತರಿಕೆ ದರ 98.74 ಪ್ರತಿಶತದಷ್ಟು ದಾಖಲಾಗಿದೆ. ಸಾವಿನ ಪ್ರಮಾಣ ಶೇ 1.19 ರಷ್ಟಿದೆ. ಕಳೆದೊಂದು ದಿನದಲ್ಲಿ 3,726 ಮಂದಿ ಚೇತರಿಕೊಂಡಿದ್ದು, ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 4,41,92,837 ಕ್ಕೆ ತಲುಪಿದೆ. ಕೇಂದ್ರ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಒಟ್ಟು 659 ಡೋಸ್ ಲಸಿಕೆ ನೀಡಲಾಗಿದ್ದು, ರಾಷ್ಟ್ರವ್ಯಾಪಿ ಕೋವಿಡ್ ಲಸಿಕಾ ಅಭಿಯಾನದಡಿಯಲ್ಲಿ ಇದುವರೆಗೆ 220.66 ಕೋಟಿ ಕೋವಿಡ್ ವ್ಯಾಕ್ಸಿನ್ ಕೊಡಲಾಗಿದೆ. ಇದರಲ್ಲಿ (95.21 ಕೋಟಿ ಎರಡನೇ ಡೋಸ್ ಮತ್ತು 22.87 ಕೋಟಿ ಮುನ್ನೆಚ್ಚರಿಕಾ ಡೋಸ್) ನೀಡಲಾಗಿದೆ.
ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯ: ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಯುಪಿ ಸರ್ಕಾರವು ಎಚ್ಚರಿಕೆ ನೀಡುತ್ತಿದೆ. ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಅವರು ಜಿಲ್ಲೆಗಳಲ್ಲಿ ಕೋವಿಡ್ ಸೆಂಟರ್‌ಗಳನ್ನು ಸಕ್ರಿಯಗೊಳಿಸಲು ಮತ್ತು ಸಮರ್ಪಕ ಔಷಧಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಾದ್ಯಂತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸದ್ಯಕ್ಕೆ ಯುಪಿಯಲ್ಲಿ ಸುಮಾರು 1000 ಸಕ್ರಿಯ ಪ್ರಕರಣಗಳಿವೆ. ವಿದೇಶದಿಂದ ದೇಶಕ್ಕೆ ಮರಳುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಜೊತೆಗೆ, ಆಸ್ಪತ್ರೆಗಳಲ್ಲಿ ಮಾಸ್ಕ್ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ :ಋತುಮಾನದ ಇನ್ಫ್ಲುಯೆಂಜಾ ಸೋಂಕಿಗಿಂತ ಓಮ್ರಿಕಾನ್ ಮಾರಾಣಾಂತಿಕ
ಮಾರಣಾಂತಿಕ ಓಮಿಕ್ರಾನ್ :ಕೋವಿಡ್ ಸೋಂಕಿನ ಉಪತಳಿಯಾದ ಓಮಿಕ್ರಾನ್ಗೆ ತುತ್ತಾದವರಲ್ಲಿ ಸಾವಿನ ಪ್ರಮಾಣ ಎಷ್ಟಿದೆ ಎಂಬುದರ ಕುರಿತು ಇಸ್ರೇಲ್ನಲ್ಲಿ ಅಧ್ಯಯನ ನಡೆಸಲಾಗಿದೆ. ಅದರ ಅನುಸಾರ, ರೂಪಾಂತರ ತಳಿ ಓಮಿಕ್ರಾನ್ ಋತುಮಾನದ ಸೋಂಕಾದ ಇನ್ಫ್ಲುಯೆಂಜಾಗಿಂತ ಮಾರಣಾಂತಿಕವಾಗಿದೆ ಎಂದು ತಿಳಿದು ಬಂದಿದೆ. ಆಸ್ಪತ್ರೆಗೆ ದಾಖಲಾದ ಇನ್ಫ್ಲುಯೆಂಜಾ ಸೋಂಕಿತರಿಗಿಂತಲೂ ಓಮಿಕ್ರಾನ್ ಸೋಂಕಿತರ ಸಾವಿನ ಪ್ರಮಾಣ ಅಧಿಕವಾಗಿದೆ. ಆದರೂ ಓಮ್ರಿಕಾನ್ ಡೆಲ್ಟಾ ಮತ್ತು ಅಲ್ಫಾ ತಳಿಗೆ ಹೋಲಿಕೆ ಮಾಡಿದಾಗ ಈ ಸೋಂಕಿತರ ಸಾವಿನ ಪ್ರಮಾಣ ಕಡಿಮೆ ಇದೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ. ಇಸ್ಟೇಲ್ನ ಬೆಲಿನಿಸನ್ ಆಸ್ಪತ್ರೆಯ ರಾಬಿನ್ ಮೆಡಿಕಲ್ ಸೆಂಟರ್‌ನ ಡಾ. ಅಲಾ ಆಟಮ್ನಾ ಮತ್ತು ಅವರ ಸಹೋದ್ಯೋಗಿಗಳು ಈ ಅಧ್ಯಯನ ನಡೆಸಿದ್ದಾರೆ.