ನವದೆಹಲಿ:ಕೋವಿಡ್-19 ಗುಣಪಡಿಸುವ ಆ್ಯಂಟಿಬಾಡಿ ಕಾಕ್ಟೇಲ್ ಔಷಧಿಯ ಪ್ರಥಮ ಬ್ಯಾಚನ್ನು ಇಂದು ಭಾರತದಲ್ಲಿ ಬಿಡುಗಡೆಗೊಳಿಸಿರುವುದಾಗಿ ಜಾಗತಿಕ ಫಾರ್ಮಾ ಕಂಪನಿ ರೋಶ್ ಇಂಡಿಯಾ ಇಂದು ಘೋಷಿಸಿದೆ. ಕ್ಯಾಸಿರಿವಿಮ್ಯಾಬ್ ಹಾಗೂ ಇಮ್ಡೆವಿಮ್ಯಾಬ್ ಈ ಎರಡು ಔಷಧಿಗಳ ಕಾಕ್ಟೇಲ್ ಆಗಿರುವ ಈ ಆ್ಯಂಟಿಬಾಡಿ ಔಷಧಿಯ ಒಂದು ಡೋಸ್ ಬೆಲೆ ಭಾರತದಲ್ಲಿ ಪ್ರಸ್ತುತ 59,750 ರೂಪಾಯಿಗಳಾಗಿದೆ.
ಕಳೆದ ವರ್ಷ ಆಗಿನ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರಿಗೆ ಕೊರೊನಾ ಸೋಂಕು ತಗುಲಿದಾಗ ಇದೇ ಆ್ಯಂಟಿಬಾಡಿ ಔಷಧಿ ನೀಡುವ ಮೂಲಕ ಅವರನ್ನು ಗುಣಪಡಿಸಲಾಗಿತ್ತು.
"ಈ ಔಷಧಿಯ 1200 ಎಂಜಿ ಯ ಪ್ರತಿಯೊಂದು ಡೋಸ್ 600 ಎಂಜಿ ಕ್ಯಾಸಿರಿವಿಮ್ಯಾಬ್ ಮತ್ತು 600 ಎಂಜಿ ಇಮ್ಡೆವಿಮ್ಯಾಬ್ಗಳನ್ನು ಒಳಗೊಂಡಿದೆ. ಪ್ರತಿ ಡೋಸ್ ಬೆಲೆ 59,750 ರೂಪಾಯಿಗಳಾಗಿದ್ದು, ಎರಡು ಡೋಸಿನ ಪ್ಯಾಕೆಟ್ ಬೆಲೆ 1,19,500 ರೂಪಾಯಿಗಳಾಗಿದೆ. ಪ್ರತಿ ಪ್ಯಾಕ್ನಿಂದ ಇಬ್ಬರು ರೋಗಿಗಳಿಗೆ ಔಷಧ ನೀಡಬಹುದು." ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಭಾರತದಲ್ಲಿ ಸಿಪ್ಲಾ ಕಂಪನಿಯು ಈ ಔಷಧಿಯಲ್ಲಿ ಮಾರುಕಟ್ಟೆಯಲ್ಲಿ ಮಾರಲಿದ್ದು, ಔಷಧಿಯ ಎರಡನೇ ಬ್ಯಾಚ್ ಜೂನ್ ಮಧ್ಯದ ವೇಳೆಗೆ ಲಭ್ಯವಾಗಲಿದೆ.