ನವದೆಹಲಿ :ಕೆಲವು ಷರತ್ತುಗಳೊಂದಿಗೆ ಕೋವಿಡ್ ಲಸಿಕೆ ಸ್ಪುಟ್ನಿಕ್ ವಿಯ ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದ್ದು, ಈ ಮೂಲಕ ದೇಶದಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಜೊತೆಗೆ ಮೂರನೇ ಲಸಿಕೆಗೆ ದಾರಿ ಮಾಡಿಕೊಡಲಾಗಿದೆ. ಇದಲ್ಲದೇ, ಇತರ ಕೆಲ ವಿದೇಶಿ ಲಸಿಕೆಗಳ ಬಳಕೆಗೆ ತುರ್ತು ಅನುಮೋದನೆ ನೀಡಲು ಸರ್ಕಾರ ತಯಾರಿ ನಡೆಸಿದೆ.
ಪ್ರಸ್ತುತ ಬಳಕೆಯಲ್ಲಿರುವ ಪ್ರಮುಖ ಕೋವಿಡ್ ಲಸಿಕೆಗಳ ಮಾಹಿತಿ ಹೀಗಿವೆ:
ಕೋವ್ಯಾಕ್ಸಿನ್ :
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಇದನ್ನು ತಯಾರಿಸಿದೆ. ಇದು ಕೋವಿಡ್ ವೈರಸ್ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ. ಕೋವಿಡ್ ವೈರಸ್ ಮಾದರಿಗಳನ್ನು ರಾಸಾಯನಿಕವಾಗಿ ಸಂಸ್ಕರಿಸುವ ಮೂಲಕ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಕೋವಿಡ್ ವೈರಸ್ಗಳು ಮರು ಉತ್ಪತಿಯಾಗದಂತೆ ತಡೆಯುತ್ತವೆ.
ನಾಲ್ಕು ವಾರಗಳ ಅಂತರದಲ್ಲಿ ಎರಡು ಡೋಸ್ ಪ್ರಮಾಣದಲ್ಲಿ ಈ ಲಸಿಕೆ ನೀಡಲಾಗುತ್ತದೆ. ಇದನ್ನು 2-8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಬಹುದು. ಒಟ್ಟು 3 ಹಂತಗಳ ಪ್ರಯೋಗದ ನಂತರ ದೊರೆತ ಪ್ರಾಥಮಿಕ ಮಾಹಿತಿಯ ಪ್ರಕಾರ ಕೋವ್ಯಾಕ್ಸಿನ್ ಲಸಿಕೆ ಕೋವಿಡ್ ವೈರಸ್ ವಿರುದ್ಧ ಶೇ. 81 ರಷ್ಟು ಪರಿಣಾಮಕಾರಿತ್ವ ಹೊಂದಿದೆ.
ಕೋವಿಶೀಲ್ಡ್ :
ಈ ಲಸಿಕೆಯನ್ನು ಆಕ್ಸ್‌ಫರ್ಡ್ ವಿಶ್ವ ವಿದ್ಯಾಲಯ ಮತ್ತು ಬ್ರಿಟಿಷ್ - ಸ್ವೀಡಿಷ್ ಕಂಪನಿ ಅಸ್ಟ್ರಾಜೆನೆಕಾ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಭಾರತದಲ್ಲಿ ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಉತ್ಪಾದಿಸುತ್ತಿದೆ.
ಈ ಲಸಿಕೆಯನ್ನು ನಾಲ್ಕು ವಾರಗಳ ಅಂತರದಲ್ಲಿ ಎರಡು ಡೋಸ್ ನೀಡಲಾಗುತ್ತದೆ. ಮೊದಲ ಡೋಸ್ ನೀಡಿದ ನಂತರ ಈ ಲಸಿಕೆ ಕೋವಿಡ್ ವಿರುದ್ಧ ಶೇ. 70 ರಷ್ಟು ಪರಿಣಾಮ ಬೀರುತ್ತದೆ. ಈ ಲಸಿಕೆಯ ಜಾಗತಿಕ ಕ್ಲಿನಿಕಲ್ ಪ್ರಯೋಗಗಳು ಜನರಿಗೆ ಅರ್ಧ ಡೋಸ್ ಮತ್ತು ನಂತರ ಪೂರ್ಣ ಪ್ರಮಾಣ ನೀಡಿದಾಗ, ಶೇ. 90 ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿದೆ. ಇದನ್ನು 2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಬಹುದು.
ಸ್ಪುಟ್ನಿಕ್ ವಿ :
ರಷ್ಯಾದ ಗಮಲೇಯಾ ಸಂಶೋಧನಾ ಸಂಸ್ಥೆಯ ಸ್ಪುಟ್ನಿಕ್ ವಿ ಭಾರತದಲ್ಲಿ ತುರ್ತು ಬಳಕೆಗಾಗಿ ಅನುಮೋದಿಸಲಾದ ಇತ್ತೀಚಿನ ಲಸಿಕೆ. ಸ್ಪುಟ್ನಿಕ್ ವಿಯನ್ನು ಕೋಲ್ಡ್-ಟೈಪ್ ವೈರಸ್ ವೆಕ್ಟರ್ ಆಗಿ ಬಳಸಲಾಗುತ್ತದೆ. ಈ ಲಸಿಕೆಯು ಸ್ವಲ್ಪ ವಿಶೇಷವಾಗಿದ್ದು, ಈ ಲಸಿಕೆಯ ಮೂಲಕ ಕೋವಿಡ್ ವೈರಸ್ನ ಒಂದ ಸಣ್ಣ ಭಾಗವನ್ನು ದೇಹಕ್ಕೆ ಇಂಜೆಕ್ಟ್ ಮಾಡಲಾಗುತ್ತದೆ. ಇದು ದೇಹದಲ್ಲಿ ಕೋವಿಡ್ ವೈರಸ್ ಅನ್ನು ಗುರುತಿಸಿ, ಅದರ ವಿರುದ್ಧ ಹೋರಾಡಲು ಸಹಕಾರಿಯಾಗುತ್ತದೆ.
ಸ್ಪುಟ್ನಿಕ್ ವಿ ಶೇ. 92 ರಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಇದನ್ನು ಮೂರು ವಾರಗಳ ಅಂತರದಲ್ಲಿ ಎರಡು ಡೋಸ್ ನೀಡಲಾಗುತ್ತದೆ. 2-8 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನದಲ್ಲಿ ಇದನ್ನು ಸಂಗ್ರಹಿಸಬಹುದು.
ಮೊಡೆರ್ನಾ:
ಯುಎಸ್ ಮೂಲದ ಕಂಪನಿ ಮೊಡೆರ್ನಾ ಉತ್ಪಾದಿಸಿದ ಎಂಆರ್‌ಎನ್‌ಎ ಲಸಿಕೆ ಶೇಕಡಾ 94.1 ರಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಕ್ಲಿನಿಕಲ್ ಪ್ರಯೋಗದಲ್ಲಿ ತಿಳಿದು ಬಂದಿದೆ. ಈ ರೀತಿಯ ಲಸಿಕೆ ಮೆಸೆಂಜರ್ ಆರ್ಎನ್ಎ ಅಥವಾ ಎಂಆರ್‌ಎನ್‌ಎ ಕೊರೊನಾ ವೈರಸ್ ಸ್ಪೈಕ್ ಪ್ರೋಟೀನ್ ಉತ್ಪಾದನೆಗೆ ನೀಲನಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ.
ಈ ರೀತಿಯ ಲಸಿಕೆಗಳಲ್ಲಿರುವ ವೈರಲ್ ಫ್ರೋಟೀನ್ ದೇಹದ ರೋಗ ನಿರೋಧಕ ವ್ಯವಸ್ಥೆಗೆ ರೋಗಾಣುಗಳನ್ನು ನಿರ್ನಾಮ ಮಾಡುವ ಬಗ್ಗೆ ತರಬೇತಿ ನೀಡುತ್ತದೆ.
28 ದಿನಗಳ ಅಂತರದಲ್ಲಿ ಎರಡು ಡೋಸ್‌ಗಳಾಗಿ ಈ ಲಸಿಕೆಯನ್ನು ನೀಡಬಹುದು. ರೆಫ್ರಿಜರೇಟರ್‌ನಲ್ಲಿ 2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ 30 ದಿನಗಳವರೆಗೆ ಇದನ್ನು ಸಂಗ್ರಹಿಸಬಹುದು. -20 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇದನ್ನು ಆರು ತಿಂಗಳವರೆಗೆ ಸಂಗ್ರಹಿಸಬಹುದು.
ಫೈಝರ್ ಬಯೋನ್ಟೆಕ್ :
ಯುಎಸ್ ಮೂಲದ ಫೈಝರ್- ಬಯೋನ್ಟೆಕ್ ಕೋವಿಡ್ -19 ಲಸಿಕೆ, ಮೊಡೆರ್ನಾ ರೀತಿಯ ಲಸಿಕೆಯಾಗಿದೆ. ಇದು ಕೋವಿಡ್ ವೈರಸ್ನ ಅನುವಂಶಿಕ ವಸ್ತುಗಳ ಭಾಗಗಳನ್ನು ಆಧರಿಸಿದೆ. ಮೂರು ವಾರಗಳ ಅಂತರದಲ್ಲಿ ಎರಡು ಡೋಸ್‌ಗಳಾಗಿ ನೀಡಲಾಗುವ ಈ ಲಸಿಕೆ, ಶೇ. 94 ರಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಕ್ಲಿನಿಕಲ್ ಪ್ರಯೋಗಗಳ ಪ್ರಾಥಮಿಕ ಮಾಹಿತಿ ತೋರಿಸಿದೆ. ಫೈಝರ್ ಲಸಿಕೆಯನ್ನು -70 ಡಿಗ್ರಿ ಅಲ್ಟ್ರಾಕೋಲ್ಡ್ ವ್ಯವಸ್ಥೆಯಲ್ಲಿ ಶೇಖರಣೆ ಮಾಡುವುದು ಅಗತ್ಯವಾಗಿದೆ.
ಜಾನ್ಸನ್ & ಜಾನ್ಸನ್ :
ಅಮೆರಿಕನ್ ಕಂಪನಿಯ ಈ ಅಡೆನೊವೈರಸ್ ವೆಕ್ಟರ್ಡ್ ಲಸಿಕೆಯನ್ನು ಒಂದೇ ಡೋಸ್ ಆಗಿ ನೀಡಲಾಗುತ್ತದೆ. ಇದನ್ನು 2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಮೂರು ತಿಂಗಳವರೆಗೆ ಮತ್ತು -20 ಡಿಗ್ರಿ ಸೆಲ್ಸಿಯಸ್‌ನಲ್ಲಿ ಹೆಪ್ಪುಗಟ್ಟಿದಾಗ ಎರಡು ವರ್ಷಗಳವರೆಗೆ ಸಂಗ್ರಹಿಸಿಡಬಹುದು ಎಂದು ಕಂಪನಿ ತಿಳಿಸಿದೆ. ಜೆ & ಜೆ ಲಸಿಕೆಯ ಒಟ್ಟಾರೆ ಪರಿಣಾಮಕಾರಿತ್ವವು ಜಾಗತಿಕವಾಗಿ ಶೇ. 66 ಮತ್ತು ಯುಎಎಸ್ನಲ್ಲಿ ಶೇ. 72 ಎಂದು ಕಂಡುಬಂದಿದೆ.