ನವದೆಹಲಿ :ಕೊರೊನಾ ಲಸಿಕೆ ಭಾರತಕ್ಕೆ ಬರುತ್ತಿದ್ದಂತೆಯೇ ಇಡೀ ರಾಷ್ಟ್ರಕ್ಕೆ ಉಚಿತವಾಗಿ ಲಸಿಕೆ ಸಿಗುವುದು ಎಂದು ಹೇಳಿದ್ದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಮೊದಲ ಹಂತದಲ್ಲಿ ಮೂರು ಕೋಟಿ ಜನರಿಗೆ ಮಾತ್ರ ಉಚಿತವಾಗಿ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಲಸಿಕೆ ನೀಡುವ ವೇಳೆ ಎದುರಾಗುವ ಸಮಸ್ಯೆಗಳನ್ನು ಗುರುತಿಸುವ ಸಲುವಾಗಿ ದೇಶಾದಾದ್ಯಂತ ಇಂದಿನಿಂದ ಕೋವಿಡ್ ಲಸಿಕೆಯ ಡ್ರೈ ರನ್ (ತಾಲೀಮು) ಆರಂಭಗೊಂಡಿದೆ. ದೆಹಲಿಯ ದರಿಯಾಗಂಜ್ ಪ್ರಾಥಮಿಕ ಆರೋಗ್ಯ ಕೇಂದ್ರ, ಗುರು ತೇಜ್ ಬಹದ್ದೂರ್ ಆಸ್ಪತ್ರೆ ಮತ್ತು ವೆಂಕಟೇಶ್ವರ ಆಸ್ಪತ್ರೆಯಲ್ಲಿ ತಾಲೀಮು ನಡೆಯುತ್ತಿದೆ.
ಇದನ್ನೂ ಓದಿ: ರಾಜ್ಯದ ಐದು ಜಿಲ್ಲೆಗಳಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈ ರನ್ ಶುರು: ಹೀಗಿದೆ ಲಸಿಕೆ ನೀಡುವ ಪ್ರಕ್ರಿಯೆ!
ಗುರು ತೇಜ್ ಬಹದ್ದೂರ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಲಸಿಕೆಯ ಡ್ರೈ ರನ್ ಪರಿಶೀಲನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಹರ್ಷವರ್ಧನ್, ದೆಹಲಿಗೆ ಮಾತ್ರವಲ್ಲ, ಭಾರತದ ಎಲ್ಲರಿಗೂ ಕೋವಿಡ್ ಲಸಿಕೆ ಉಚಿತವಾಗಿ ಸಿಗಲಿದೆ ಎಂದು ಹೇಳಿದ್ದರು.
ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ಅವರು ಮೊದಲ ಹಂತದ ವ್ಯಾಕ್ಸಿನೇಷನ್ ಪ್ರಕ್ರಿಯೆಯಲ್ಲಿ ಒಂದು ಕೋಟಿ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿವಿಧ ಕ್ಷೇತ್ರಗಳ ಎರಡು ಕೋಟಿ ಮಂದಿಗೆ ಉಚಿತ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.