ಪುಣೆ (ಮಹಾರಾಷ್ಟ್ರ):ಜಾಗತಿಕ ಲಸಿಕೆ ತಯಾರಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಕೋವಿಡ್-19 ಲಸಿಕೆ ಕೊವೊವಾಕ್ಸ್ ಅನ್ನು ಪುಣೆಯ ತನ್ನ ಸ್ಥಾವರದಲ್ಲಿ ಉತ್ಪಾದಿಸಲು ಪ್ರಾರಂಭಿಸಿದೆ. ಕೊವೊವಾಕ್ಸ್ ಅನ್ನು ಅಮೆರಿಕಾದ ಜೈವಿಕ ತಂತ್ರಜ್ಞಾನ ಕಂಪನಿ ನೊವಾವಾಕ್ಸ್ ಇಂಕ್ ಅಭಿವೃದ್ಧಿಪಡಿಸಿದೆ.
ಈ ಕುರಿತು ಟ್ವಿಟರ್ ಮೂಲಕ ಪ್ರಕಟಿಸಿದ ಎಸ್ಐಐ, "ಹೊಸ ಮೈಲಿಗಲ್ಲು ತಲುಪಿದ್ದೇವೆ. ಈ ವಾರ ನಾವು ಪುಣೆಯಲ್ಲಿ ನಮ್ಮ ಮೊದಲ ಬ್ಯಾಚ್ನ ಕೊವೊವಾಕ್ಸ್ ಉತ್ಪಾದನೆ ಪ್ರಾರಂಭಿಸಿದೆವು" ಎಂದು ಹೇಳಿದೆ.
ಎಸ್ಐಐ ಪ್ರಕಾರ, ಕೊವಾವ್ಯಾಕ್ಸ್ ಲಸಿಕೆ ಶೇಕಡಾ 89ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿದೆ ಮತ್ತು ಕೊರೊನಾ ವೈರಸ್ನ ರೂಪಾಂತರದ ವಿರುದ್ಧವೂ ಹೋರಾಡುತ್ತದೆ.
ಕಳೆದ ಮಾರ್ಚ್ನಲ್ಲಿ, ಎಸ್ಐಐ ಸಿಇಒ ಆದರ್ ಪೂನವಾಲ್ಲಾ ಕೊವೊವಾಕ್ಸ್ನ ಕ್ಲಿನಿಕಲ್ ಪ್ರಯೋಗಗಳು ದೇಶದಲ್ಲಿ ಪ್ರಾರಂಭವಾಗಿವೆ ಮತ್ತು ಈ ವರ್ಷದ ಸೆಪ್ಟೆಂಬರ್ ವೇಳೆಗೆ ಅದರ ಉತ್ಪಾದನೆ ಪ್ರಾರಂಭಿಸಲು ಕಂಪನಿ ಆಶಿಸಿದೆ ಎಂದು ಹೇಳಿದ್ದರು.
ಕೊವೊವಾಕ್ಸ್ ಎಸ್ಐಐ ಉತ್ಪಾದಿಸುವ ಎರಡನೇ ಕೋವಿಡ್ -19 ಲಸಿಕೆ ಆಗಲಿದೆ. ಎಸ್ಐಐ ಈಗಾಗಲೇ ಭಾರತದಲ್ಲಿ ಮತ್ತು ವಿಶ್ವದ ಇತರ ದೇಶಗಳಿಗೆ ಅಸ್ಟ್ರಾಜೆನೆಕಾ/ಕೋವಿಶೀಲ್ಡ್ ಪೂರೈಸುತ್ತಿದೆ.