ಹೈದರಾಬಾದ್ (ತೆಲಂಗಾಣ) : ಕೋವಿಡ್ ಎರಡನೇ ಅಲೆ ದೇಶಾದ್ಯಂತ ಅಬ್ಬರಿಸುತ್ತಿದೆ. ಕೋವಿಡ್ ಪರಿಸ್ಥಿತಿಯ ಕುರಿತು ಮಾಹಿತಿ ತಿಳಿಸುವ ಉದ್ದೇಶದಿಂದ ಪ್ರತಿ 24 ಗಂಟೆಗಳಿಗೊಮ್ಮೆ ಹೊಸ ಪ್ರಕರಣ, ಸಾವು, ಸಕ್ರಿಯ ಪ್ರಕರಣಗಳು ಹೀಗೆ ಎಲ್ಲಾ ಮಾಹಿತಿಯನ್ನು ಬಿಡುಗಡೆ ಮಾಡಲಾಗುತ್ತದೆ.
ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 2,17,353 ಹೊಸ ಪ್ರಕರಣಗಳು ವರದಿಯಾಗಿದ್ದು, 1,185 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೆಲ ರಾಜ್ಯಗಳಲ್ಲಿ ಕೋವಿಡ್ ಅಟ್ಟಹಾಸ ಮೆರೆಯುತ್ತಿರುವುದರಿಂದ ಸೋಂಕಿನಿಂದ ಮರಣ ಹೊಂದಿದವರ ಅಂತ್ಯ ಸಂಸ್ಕಾರ ಸವಾಲಾಗಿದೆ.
ಈ ನಡುವೆ ಆಘಾತಕಾರಿ ವಿಷಯವೊಂದು ಬಯಲಾಗಿದ್ದು, 'ಈಟಿವಿ ಭಾರತ' ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಸರ್ಕಾರ ಒದಗಿಸಿದ ಮಾಹಿತಿ ಮತ್ತು ಸಂಭವಿಸಿದ ಕೋವಿಡ್ ಸಾವಿನ ಕುರಿತು ಸರ್ಕಾರ ಒದಗಿಸಿದ ಮಾಹಿತಿಯಲ್ಲಿ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ.
ಮಧ್ಯಪ್ರದೇಶ :
ಕಳೆದ 24 ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ 10,166 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 53 ಜನರು ಮೃತಪಟ್ಟಿದ್ದಾರೆ. ಏಪ್ರಿಲ್ 12 ರ ಸಚಿವಾಲಯದ ಅಂಕಿ ಅಂಶಗಳು ಆ ದಿನ ಕೋವಿಡ್ ವೈರಸ್‌ನಿಂದ ರಾಜ್ಯಾದ್ಯಂತ 47 ಜನರು ಸಾವನ್ನಪ್ಪಿದ್ದಾರೆ. ಆದರೆ ಕೇವಲ ಎರಡು ಜಿಲ್ಲೆಗಳಲ್ಲಿ 95 ಶವಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ. ಭೋಪಾಲ್‌ನಲ್ಲಿ 58 ಮತ್ತು ಚಿಂದ್ವಾರದಲ್ಲಿ 37. 'ಈಟಿವಿ ಭಾರತ' ಭೇಟಿ ನೀಡದ ಇನ್ನೂ 50 ಜಿಲ್ಲೆಗಳಿವೆ. ಇದು ರಾಜ್ಯ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಮೇಲೆ ಗಂಭೀರ ಅನುಮಾನವನ್ನು ಹುಟ್ಟುಹಾಕುತ್ತಿದೆ.