ನವದೆಹಲಿ: ಜಗತ್ತಿನಲ್ಲಿ ಆತಂಕ ಹುಟ್ಟಿಸಿರುವ ಕೋವಿಡ್ ಹೊಸ ರೂಪಾಂತರಿ ಬಿಎಫ್7 ವೈರಾಣು ತಡೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಚೀನಾ ಸೇರಿದಂತೆ ಪ್ರಮುಖ ಆರು ರಾಷ್ಟ್ರಗಳಿಂದ ಭಾರತಕ್ಕೆ ಆಗಮಿಸುವ ಎಲ್ಲ ವಿಮಾನ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ ಮಾಡಿದೆ.
ಚೀನಾ ಮತ್ತು ಇತರ ರಾಷ್ಟ್ರಗಳಲ್ಲಿ ಬಿಎಫ್7 ಹೊಸ ರೂಪಾಂತರಿ ವೇಗವಾಗಿ ಹರಡುತ್ತಿದೆ. ಈ ಸೋಂಕು ಭಾರತಕ್ಕೂ ಕಾಲಿಡುವ ಸಂಭವವಿದೆ. ಆದ್ದರಿಂದ ಈಗಾಗಲೇ ಕೇಂದ್ರ ಸರ್ಕಾರ ಮಾಸ್ಕ್ ಧರಿಸುವುದೂ ಸೇರಿದಂತೆ ಕೆಲವು ನಿಯಮಗಳನ್ನು ಪಾಲಿಸಲು ಜನತೆಗೆ ಮನವಿ ಮಾಡಿದೆ. ಇದರ ನಡುವೆ ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಕಣ್ಣಿಡಲು ಆರೋಗ್ಯ ಸಚಿವಾಲಯ ಮುಂದಾಗಿದೆ.
ಇದನ್ನೂ ಓದಿ:ಬಿಎಫ್ 7 ವೈರಾಣು: ಭಾರತಕ್ಕೆ ಮುಂದಿನ 30 ದಿನ ನಿರ್ಣಾಯಕ- ಕೇಂದ್ರ ಆರೋಗ್ಯ ಸಚಿವ
2023ರ ಜನವರಿ 1ರಿಂದ ಚೀನಾ, ಹಾಂಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಥಾಯ್ಲೆಂಡ್‌ನಿಂದ ಭಾರತಕ್ಕೆ ಬರುವ ಎಲ್ಲ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಿಂದ ಹೊರಬರುವ ಮೊದಲು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಬೇಕು. ಇದರ ವರದಿಯನ್ನು ಏರ್ ಸುವಿಧಾ ಪೋರ್ಟಲ್ ಅಪ್‌ಲೋಡ್ ಮಾಡಬೇಕೆಂದು ಸೂಚಿಸಲಾಗಿದೆ.
ಅಲ್ಲದೇ, ಭಾರತಕ್ಕೆ ಆಗಮಿಸುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ರ‍್ಯಾಂಡಮ್ ಪರೀಕ್ಷೆಯನ್ನು ಶೇ.2ರಷ್ಟು ಹೆಚ್ಚುವರಿಯಾಗಿ ನಡೆಸಬೇಕು. ಭಾರತಕ್ಕೆ ಪ್ರಯಾಣ ಬೆಳೆಸಿದ 72 ಗಂಟೆಗಳೊಳಗೆ ಈ ಪರೀಕ್ಷೆ ನಡೆಸಬೇಕೆಂದೂ ತಿಳಿಸಿದೆ. ಬುಧವಾರವಷ್ಟೇ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ಭಾರತಕ್ಕೆ ಬಿಎಫ್7 ವೈರಾಣು ಕುರಿತಾಗಿ ಮುಂದಿನ 40 ದಿನಗಳು ನಿರ್ಣಾಯಕ ಎಂದು ಎಚ್ಚರಿಸಿದ್ದರು.
ಜನವರಿ ತಿಂಗಳ ಮಧ್ಯದಲ್ಲಿ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಉಲ್ಬಣಗೊಳ್ಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಹೊಸ ವರ್ಷಾಚರಣೆ ಮತ್ತು ಹಬ್ಬ ಮತ್ತು ಹರಿದಿನಗಳಲ್ಲಿ ಜನತೆ ಎಚ್ಚರದಿಂದ ಇರಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಲಾಗಿದೆ. ಕೆಲವು ರಾಜ್ಯಗಳಲ್ಲಿ ಕೆಲವು ನಿರ್ಬಂಧಗಳನ್ನೂ ಹೇರಲಾಗುತ್ತಿದೆ.
ಇದನ್ನೂ ಓದಿ:ಅಮೆರಿಕದಲ್ಲಿ ಚೀನಾದಿಂದ ಬರುವವರಿಗೆ ಕೊರೊನಾ ನಿಯಮ ಪಾಲನೆ ಕಡ್ಡಾಯ: ವರದಿ