ನವದೆಹಲಿ: ''ಕೋವಿಡ್-19ರ ಉಪತಳಿ JN.1 ಸೋಂಕಿನ ಪ್ರಕರಣಗಳು ದೇಶದಲ್ಲಿ ಹೆಚ್ಚಿವೆ. ದೇಶಾದ್ಯಂತ ಸೋಂಕು ಪ್ರಕರಣಗಳ ಸಂಖ್ಯೆ 197 ಏರಿಕೆಯಾಗಿವೆ. ಕೇರಳವೊಂದರಲ್ಲೇ ಅತಿ ಹೆಚ್ಚು 83 ಪ್ರಕರಣಗಳು ದೃಢಪಟ್ಟಿವೆ'' ಎಂದು ಇಂಡಿಯನ್ ಸಾರ್ಸ್-ಕೋವ್-2 ಜಿನೋಮಿಕ್ಸ್ ಕನ್ಸೋರ್ಟಿಯಂ (INSACOG) ಬಹಿರಂಗಪಡಿಸಿದೆ. ಪ್ರಸ್ತುತ ಒಡಿಶಾದಲ್ಲಿ JN.1 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಭಾರತದಲ್ಲಿ ಈವರೆಗೆ 10 ರಾಜ್ಯಗಳು, ಕೇಂದ್ರಾಡಳಿತಗಳಲ್ಲಿ JN.1 ಪ್ರಕರಣಗಳು ವರದಿಯಾಗಿವೆ. ಕೇರಳ (83), ಗೋವಾ (51), ಗುಜರಾತ್ (34), ಕರ್ನಾಟಕ (8), ಮಹಾರಾಷ್ಟ್ರ (8), ರಾಜಸ್ಥಾನ (5), ತಮಿಳುನಾಡು (4), ತೆಲಂಗಾಣ (2), ಒಡಿಶಾ (1), ದೆಹಲಿ (1) ಪ್ರಕರಣಗಳು ಪತ್ತೆಯಾಗಿವೆ.
17 JN.1 ಪ್ರಕರಣಗಳು ನವೆಂಬರ್‌ನಲ್ಲಿ ಪತ್ತೆಯಾಗಿದ್ದವು. 180 ಡಿಸೆಂಬರ್‌ನಲ್ಲಿ ದೃಢೀಕರಿಸಲ್ಪಟ್ಟಿವೆ ಎಂದು ಇಂಡಿಯನ್ ಸಾರ್ಸ್-ಕೋವ್-2 ಜಿನೋಮಿಕ್ಸ್ ಕನ್ಸೋರ್ಟಿಯಂ ತಿಳಿಸಿದೆ. ಮತ್ತೊಂದೆಡೆ, ಸ್ಥಳೀಯವಾಗಿ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಲಡಾಖ್‌ನ ಲೇಹ್ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಜನರು ಮಾಸ್ಕ್ ಧರಿಸುವುದನ್ನು ಅಧಿಕಾರಿಗಳು ಕಡ್ಡಾಯಗೊಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ (WHO) ನಿಂದ 'JN.1' ವಿಶೇಷ 'ಆಸಕ್ತಿಯ ರೂಪಾಂತರ' ಎಂದು ವರ್ಗೀಕರಿಸಲಾಗಿದೆ. ಇದರ ಹರಡುವಿಕೆ ವೇಗವಾಗಿದ್ದರೂ, ಭಯ ಕಡಿಮೆ ಎಂಬುದು ಸ್ಪಷ್ಟವಾಗಿದೆ. ಆದರೆ, ದೇಶದಲ್ಲಿ ಈ JN.1 ಪ್ರಕರಣಗಳು ಹೆಚ್ಚುತ್ತಿರುವ ಹೊರತಾಗಿಯೂ, ಪ್ರಸ್ತುತ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಮತ್ತೊಂದೆಡೆ, 636 ಕೋವಿಡ್ ಹೊಸ ಪ್ರಕರಣಗಳು ಕಂಡುಬಂದಿದ್ದು, ದೇಶಾದ್ಯಂತ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,394ಕ್ಕೆ ತಲುಪಿದೆ.
ಇದನ್ನೂ ಓದಿ:ವಿಶಾಖಪಟ್ಟಣಂ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; 8 ಮಂದಿ ಸೆರೆ