ಹೊಸದಿಲ್ಲಿ : ಕೋವಿಡ್-19ರ ಹೊಸ ತಲೆಮಾರು ಒಮಿಕ್ರಾನ್ ಸೋಂಕು ಹರಡುವಿಕೆಯಲ್ಲಿ ಡೆಲ್ಟಾ ರೂಪಾಂತರಕ್ಕಿಂತ ಅಧಿಕ. ಹಾಗಾಗಿ ಡೇಟಾ ವಿಶ್ಲೇಷಣೆಯ ಜೊತೆಗೆ ಕಟ್ಟುನಿಟ್ಟಾದ ಹಾಗೂ ತ್ವರಿತ ನಿಯಂತ್ರಣ ಕ್ರಮದ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.
"ಒಮಿಕ್ರಾನ್ ಡೆಲ್ಟಾಕ್ಕಿಂತ ಕನಿಷ್ಠ 3 ಪಟ್ಟು ಹೆಚ್ಚು ಹರಡುತ್ತದೆ. ಮುಂಜಾಗ್ರತಾ ದೃಷ್ಟಿಯಿಂದ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿದೆ. ಸೋಂಕು ಹರಡದಂತೆ ಜಿಲ್ಲಾಮಟ್ಟದಲ್ಲೇ ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಈ ನಡುವೆ ಪರಿಸ್ಥಿತಿ ಬಿಗಡಾಯಿಸಿದರೆ ಔಷಧಗಳು, ವೈದ್ಯಕೀಯ ಸಿಬ್ಬಂದಿ, ಆಸ್ಪತ್ರೆ ವ್ಯವಸ್ಥೆ, ಸಿಬ್ಬಂದಿ ಲಭ್ಯತೆ, ಕಂಟೈನ್‌ಮೆಂಟ್ ವಲಯಗಳು ಸೇರಿದಂತೆ ಎಲ್ಲವುಗಳ ಬಗ್ಗೆ ಹೆಚ್ಚು ಗಮನ ನೀಡಬೇಕು'' ಎಂದು ರಾಜೇಶ್ ಭೂಷಣ್ ತಮ್ಮ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
“ಡೆಲ್ಟಾ ರೂಪಾಂತರಕ್ಕಿಂತ ಓಮಿಕ್ರಾನ್ ಕನಿಷ್ಠ ಮೂರು ಪಟ್ಟು ಹೆಚ್ಚು ಹರಡುತ್ತದೆ ಎಂದು ನಮ್ಮ ಬಳಿ ಇರುಯ ಪುರಾವೆಗಳು ತೋರಿಸುತ್ತವೆ ಎಂದಿರುವ ಅವರು, ಈ ಬಗ್ಗೆ ಜಿಲ್ಲಾ ಮಟ್ಟದಲ್ಲಿಯೇ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ಒಂದು ವೇಳೆ ಸೋಂಕು ಹೆಚ್ಚಾದಲ್ಲಿ ಕಟ್ಟುನಿಟ್ಟಾದ ನಿರ್ಬಂಧಗಳನ್ನು ವಿಧಿಸಿ ಅಲ್ಲಿಯೇ ತಡೆಗಟ್ಟಿ. ಕೈಮೀರುವ ಮುನ್ನ ಸಕ್ರಿಯ ವಾರ್ ರೂಂ ಸೇರಿದಂತೆ ಸ್ಥಳೀಯ ಮಟ್ಟದಲ್ಲಿ ಸೂಕ್ತ ಕಾರ್ಯತಂತ್ರ ರೂಪಿಸಬೇಕು'' ಎಂದು ಸಲಹೆ ನೀಡಿದ್ದಾರೆ.
ಇದುವರೆಗೆ ಭಾರತದಲ್ಲಿ 12 ರಾಜ್ಯಗಳಲ್ಲಿ 200ಕ್ಕೂ ಹೆಚ್ಚು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ತಲಾ 54 ಒಮಿಕ್ರಾನ್ ಪ್ರಕರಣಗಳು ದಾಖಲಾಗಿದ್ದರೆ, ತೆಲಂಗಾಣ 20, ಕರ್ನಾಟಕ 19, ರಾಜಸ್ಥಾನ 18, ಕೇರಳ 15 ಮತ್ತು ಗುಜರಾತ್ 14 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: Karnataka Covid: ರಾಜ್ಯದಲ್ಲಿಂದು 295 ಮಂದಿಗೆ ಕೋವಿಡ್, 5 ಸೋಂಕಿತರ ಸಾವು