ನವದೆಹಲಿ: ಭಾರತದ ವೈದ್ಯಕೀಯ ಕ್ಷೇತ್ರಕ್ಕೆ ಮಹಾಮಾರಿ ಕೊರೊನಾ ಸವಾಲೊಡ್ಡಿದ್ದು, ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮುಂದುವರೆಸುತ್ತಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 3,46,786 ಕೇಸ್ಗಳು ಪತ್ತೆಯಾಗಿದ್ದು, 2,624 ಮಂದಿ ಕೊನೆಯುಸಿರೆಳೆದಿದ್ದಾರೆ.
ಶೇ. 70ರಷ್ಟು ಹೊಸ ಸೋಂಕಿತರು ಕರ್ನಾಟಕ, ಮಹಾರಾಷ್ಟ್ರ, ಕೇರಳ, ದೆಹಲಿ, ಉತ್ತರ ಪ್ರದೇಶ ಸೇರಿದಂತೆ 10 ರಾಜ್ಯಗಳಲ್ಲಿ ಪತ್ತೆಯಾಗುತ್ತಿದ್ದಾರೆ. ದೇಶದಲ್ಲೀಗ ಸೋಂಕಿತರ ಸಂಖ್ಯೆ 1,66,10,481 ಹಾಗೂ ಮೃತರ ಸಂಖ್ಯೆ 1,89,544ಕ್ಕೆ ಏರಿಕೆಯಾಗಿದೆ.
25 ಲಕ್ಷ ಕೇಸ್ಗಳು ಸಕ್ರಿಯ
ಕಳೆದ ತಿಂಗಳು 1 ಲಕ್ಷಕ್ಕೆ ಇಳಿಕೆ ಕಂಡಿದ್ದ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 25,52,940ಕ್ಕೆ ಹೆಚ್ಚಳವಾಗಿದೆ. ಇನ್ನು ಒಟ್ಟು 1.66 ಕೋಟಿ ಸೋಂಕಿತರ ಪೈಕಿ 1,38,67,997 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
13.83 ಕೋಟಿ ಮಂದಿಗೆ ಲಸಿಕೆ
ಇತ್ತ ಕೊರೊನಾ ವ್ಯಾಕ್ಸಿನೇಷನ್ ಡ್ರೈವ್ ಕೂಡ ಮುಂದುವರೆದಿದ್ದು, ಜನವರಿ 16ರಿಂದ ಈವರೆಗೆ ಒಟ್ಟು 13,83,79,832 ಮಂದಿಗೆ ಲಸಿಕೆ ನೀಡಲಾಗಿದೆ. ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.