ನವದೆಹಲಿ: ಕೆಲ ರಾಜ್ಯಗಳಲ್ಲಿ ಲಾಕ್ಡೌನ್, ಕಠಿಣ ಕರ್ಫ್ಯೂನಿಂದಾಗಿ ಭಾರತದಲ್ಲಿ ಕೋವಿಡ್ ಪ್ರಕರಣಗಳು ಸ್ವಲ್ಪ ಮಟ್ಟಿಗೆ ತಗ್ಗುತ್ತಿದೆಯಾದರೂ ಮೃತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಸೋಮವಾರ ಒಂದೇ ದಿನ ಈವರೆಗೆ ಅತೀ ಹೆಚ್ಚು ಎಂಬಂತೆ 4,329 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 2,63,533 ಸೋಂಕಿತರು ಪತ್ತೆಯಾಗಿದ್ದು, ದೇಶದಲ್ಲಿ ಕೇಸ್ಗಳ ಸಂಖ್ಯೆ 2,52,28,996ಗೆ ಏರಿಕೆಯಾಗಿದೆ. ಇವರಲ್ಲಿ 2,78,719 ಮಂದಿ ಪ್ರಾಣ ಕಳೆದುಕೊಂಡಿದ್ದು, 33,53,765 ಕೇಸ್ಗಳು ಆ್ಯಕ್ಟೀವ್ ಆಗಿವೆ.
24 ಗಂಟೆಯಲ್ಲಿ 4,22 ಲಕ್ಷ ಸೋಂಕಿತರು ಗುಣಮುಖ
ಕಳೆದ ಐದು ದಿನಗಳಿಂದ ದಿನವೊಂದಕ್ಕೆ ಪತ್ತೆಯಾಗುವ ಹೊಸ ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಹೆಚ್ಚಾಗಿದೆ. ನಿನ್ನೆ ಒಂದೇ ದಿನ ಅತಿ ಹೆಚ್ಚು - 4,22,436 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ ಶೇ. 84ಕ್ಕೂ ಹೆಚ್ಚು ಅಂದರೆ 2,15,96,512 ಮಂದಿ ವೈರಸ್ನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಲಸಿಕೆ ರಫ್ತಿಗೆ ಮೋದಿ ವಿರುದ್ಧ ಯಶ್ವಂತ್ ಸಿನ್ಹಾ ವಾಗ್ದಾಳಿ : ವಿಶ್ವಸಂಸ್ಥೆಯಲ್ಲಿ ಭಾರತೀಯ ಪ್ರತಿನಿಧಿ ಹೇಳಿದ್ದೇನು?
ಲಸಿಕೆಯ ಅಭಾವ
ಆರಂಭದಲ್ಲಿ 10 ಕೋಟಿ ಮಂದಿಗೆ ತ್ವರಿತಗತಿಯಲ್ಲಿ ಕೋವಿಡ್ ಲಸಿಕೆ ನೀಡಿದ್ದ, ಇತರ ರಾಷ್ಟ್ರಗಳಿಗೂ ವ್ಯಾಕ್ಸಿನ್ ಕಳುಹಿಸಿಕೊಟ್ಟಿದ್ದ ನಮ್ಮ ದೇಶದಲ್ಲೀಗ ಲಸಿಕೆಯ ಅಭಾವದಿಂದಾಗಿ ವ್ಯಾಕ್ಸಿನೇಷನ್ ಪ್ರಮಾಣ ಕಡಿಮೆಯಾಗಿದೆ. ಜನವರಿ 16ರಿಂದ ಈವರೆಗೆ ಒಟ್ಟು 18,44,53,149 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.