ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 7,633 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 61,233ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ. ಇದೇ ಅವಧಿಯಲ್ಲಿ 11 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಈವರೆಗೆ 5,31,152 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಬೆಳಗ್ಗೆ 8 ಗಂಟೆಗೆ ಲಭ್ಯವಾದ ಮಾಹಿತಿ ಪ್ರಕಾರ, ದೆಹಲಿ ಮತ್ತು ಕೇರಳದಲ್ಲಿ ತಲಾ ನಾಲ್ವರು, ಹರಿಯಾಣ, ಕರ್ನಾಟಕ ಮತ್ತು ಪಂಜಾಬ್ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕೋವಿಡ್ ಲಸಿಕೆ ಅಂಕಿ ಅಂಶ: ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4.47 ಕೋಟಿ (4,48,34,859) ದಾಖಲಾಗಿದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ದರ 98.68 ಪ್ರತಿಶತದಷ್ಟು ದಾಖಲಾಗಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,42,42,474ಕ್ಕೆ ಏರಿದೆ. ಸಾವಿನ ಪ್ರಮಾಣ ಶೇ. 1.18 ರಷ್ಟಿದೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 220.66 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.
ಮಾಸ್ಕ್ ಧರಿಸುವಂತೆ ಸೂಚನೆ: ದೇಶದಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಮಾಸ್ಕ್ ಧರಿಸುವುದು, ನಿಯಮಿತವಾಗಿ ಕೈ ತೊಳೆಯುವುದು ಮತ್ತು ಕಚೇರಿ ಸಂಸ್ಥೆಗಳ ನೈರ್ಮಲ್ಯೀಕರಣದ ಅಗತ್ಯವನ್ನು ಒತ್ತಿ ಹೇಳಿದರು. ಕ್ಯಾಬಿನೆಟ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೋವಿಡ್-19 ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಮತ್ತು ಮುಖ್ಯ ಕಾರ್ಯದರ್ಶಿ ಹೆಚ್.ಕೆ ದ್ವಿವೇದಿ ಅವರಿಗೆ ಈ ಸಂಬಂಧ ಆದೇಶ ಹೊರಡಿಸುವಂತೆ ಸೂಚಿಸಿದರು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸ್ಯಾನಿಟೈಸೇಶನ್ ಡ್ರೈವ್ ನಡೆಸಲಾಗುವುದು ಮತ್ತು ನೌಕರರು ಮಾಸ್ಕ್ ಧರಿಸಲು ನಿರ್ದೇಶಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಿ ಸೆಲ್ ಆಧಾರಿತ ಲಸಿಕೆ ಉತ್ತಮ: ಕೋವಿಡ್ ಲಸಿಕೆ ಪಡೆದಿದ್ದರೂ ಹಲವು ಬಾರಿ ಕೊರೊನಾ ರೂಪಾಂತರ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆ ವೈರಸ್ ಎದುರಿಸಲು ರೋಗ ನಿರೋಧಕ ಶಕ್ತಿ ಜೊತೆಗೆ ಪ್ರತಿಕಾಯದ ಅವಶ್ಯಕತೆ ಇದೆ. ಹೀಗಾಗಿ, ಕೋವಿಡ್ಗೆ ಟಿ ಸೆಲ್ ಆಧಾರಿತ ಲಸಿಕೆ ಉತ್ತಮ ಪರಿಹಾರ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಟಿ ಸೆಲ್ ಆಧಾರಿತ ಕೋವಿಡ್ ಲಸಿಕೆಗಳು ಪ್ರಸ್ತುತ ಲಸಿಕೆಗಳಿಂದ ಹೆಚ್ಚು ಕಾಲ ಉಳಿಯುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಕೋವಿಡ್ ಲಸಿಕೆಗಳನ್ನು ಸಾರ್ಸ್ ಕೋವ್ - 2 ಸ್ಪೈಕ್ ಪ್ರೊಟೀನ್ ವಿರುದ್ಧದ ರೋಗ ನಿರೋಧಕ ಶಕ್ತಿಯಾಗಿ ಬಳಕೆ ಮಾಡಲಾಗುತ್ತಿದೆ. ಈ ಸಾರ್ಸ್ - ಕೋವ್ 2 ಹೆಚ್ಚು ರೂಪಾಂತರಿಯಾಗಿದ್ದು, ಒಂದು ಅವಧಿ ಮುಗಿದ ಬಳಿಕ ಲಸಿಕೆ ಪರಿಣಾಮ ಕಡಿಮೆಯಾಗಿತ್ತದೆ ಎಂದು ಭಾರತೀಯ ಅಮೆರಿಕನ್ ಸಂಶೋಧಕರು ತಿಳಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ : 9,111 ಹೊಸ ಸೋಂಕಿತರು ಪತ್ತೆ, 27 ಜನ ಸಾವು