ನವದೆಹಲಿ: ದೇಶಾದ್ಯಂತ ಕೋವಿಡ್ ಪ್ರಕರಣಗಳ ಉಲ್ಬಣವನ್ನು ಪರಿಗಣಿಸಿ, ದೇಶೀಯ ವಿಮಾನಗಳ ಪ್ರಯಾಣಿಕರ ಸಾಮರ್ಥ್ಯವನ್ನು ಶೇ. 80ರಿಂದ ಶೇ. 50ಕ್ಕೆ ಇಳಿಸಲು ಹಾಗೂ ಟಿಕೆಟ್ ದರವನ್ನು ಶೇ. 15ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಆದೇಶವು ಜೂನ್ 1ರಿಂದ ಜಾರಿಗೆ ಬರಲಿದ್ದು, ಜುಲೈ 31ರವರೆಗೆ ಚಾಲ್ತಿಯಲ್ಲಿರುತ್ತದೆ. ಪ್ರಸ್ತುತ ದೇಶೀಯ ವಿಮಾನಗಳ ಕನಿಷ್ಠ ಟಿಕೆಟ್ ದರ 2,200 ರೂ.ಗಳಿಂದ 7,200 ರೂ. ಹಾಗೂ ಗರಿಷ್ಠ ಬೆಲೆ 7,800ರಿಂದ 24,200 ರೂ. ಇದೆ. ಜೂನ್ 1ರಿಂದ ಕನಿಷ್ಠ ಪ್ರಯಾಣ ದರ ಕನಿಷ್ಠ 2,600 ರೂ.ಗಳಿಂದ 7,800 ರೂ.ಗಳಿಗೆ ಮತ್ತು ಗರಿಷ್ಠ ದರವನ್ನು 8,700 ರೂ.ಗಳಿಂದ 24,200 ರೂ.ಗಳಿಗೆ ಹೆಚ್ಚಾಗಲಿದೆ.
ಇದನ್ನೂ ಓದಿ:Rafale: ಫ್ರಾನ್ಸ್‌ನಿಂದ ಭಾರತಕ್ಕೆ ಬಂದ ಆರನೇ ಬ್ಯಾಚ್ ರಫೇಲ್ ಯುದ್ಧ ವಿಮಾನಗಳು
ನಾಗರಿಕ ವಿಮಾನಯಾನ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಅವರೊಂದಿಗಿನ ಸಭೆಯಲ್ಲಿ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ದೇಶದಲ್ಲಿ ಕೊರೊನಾ ಎರಡನೇ ಅಲೆಯನ್ನು ಎದುರಿಸಲು ಕೇಂದ್ರದಿಂದ ಹಣಕಾಸಿನ ನೆರವು ಕೋರಿದ್ದಾರೆ ಮತ್ತು ವಿಮಾನ ಸಾಮರ್ಥ್ಯವನ್ನು ಶೇ. 60ಕ್ಕಿಂತ ಕಡಿಮೆ ಮಾಡಲು ವಿನಂತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಕಳೆದ ಮಾರ್ಚ್ 25, 2020ರಿಂದ ಲಾಕ್ಡೌನ್ ಹಾಗೂ ಕೊರೊನಾ ಸಂಬಂಧ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಈ ವರ್ಷ ಮತ್ತೆ ಭಾರತದಲ್ಲಿ ಕೋವಿಡ್ ಹೆಚ್ಚಾಗಿರುವ ಕಾರಣ ಅಂತಾರಾಷ್ಟ್ರೀಯ ವಿಮಾನ ಸೇವೆ ನಿರ್ಬಂಧವನ್ನ ಜೂನ್ 30, 2021ರವರೆಗೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ವಿಸ್ತರಿಸಿದೆ.