ನವದೆಹಲಿ: ಭಾರತದಲ್ಲಿ ಮತ್ತೆ ಕೋವಿಡ್ 19 ವೈರಸ್ ಕೇಸ್ಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಳೆದೊಂದು ದಿನದಲ್ಲಿ ಬರೋಬ್ಬರಿ 9,111 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 60,313 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 27 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 5,31,141 ಕ್ಕೆ ತಲುಪಿದೆ. ಗುಜರಾತ್ನಲ್ಲಿ 6 ಮಂದಿ ಸಾವನ್ನಪ್ಪಿರುವುದು ವರದಿಯಾಗಿದ್ದರೆ, ಉತ್ತರಪ್ರದೇಶದಲ್ಲಿ ನಾಲ್ಕು, ದೆಹಲಿ ಮತ್ತು ರಾಜಸ್ಥಾನದಿಂದ ತಲಾ ಮೂರು, ಮಹಾರಾಷ್ಟ್ರದಿಂದ ಎರಡು, ಬಿಹಾರ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಜಾರ್ಖಂಡ್ ಮತ್ತು ತಮಿಳುನಾಡಿನಿಂದ ತಲಾ ಒಬ್ಬೊಬ್ಬರು ಮತ್ತು ಕೇರಳದಲ್ಲಿ ನಾಲ್ಕು ಸಾವು ಸಂಭವಿಸಿದೆ ಎಂದು ಇಂದು ಬೆಳಗ್ಗೆ ನವೀಕರಿಸಲಾದ ಡೇಟಾದಲ್ಲಿ ತಿಳಿಸಲಾಗಿದೆ. ಇನ್ನು ಕಳೆದೊಂದು ದಿನದಲ್ಲಿ ಪತ್ತೆಯಾದ ಸೋಂಕಿತರು ಸೇರಿದಂತೆ ಇದುವರೆಗೆ 4.47 ಕೋಟಿಗೆ (4,48,27,226) ಮಂದಿಗೆ ಸೋಂಕು ತಗುಲಿದೆ.
ಇದನ್ನೂ ಓದಿ :ಪ್ರಸ್ತುತ ಲಸಿಕೆಗಿಂತ ಟಿ-ಸೆಲ್ ಕೋವಿಡ್ ಲಸಿಕೆ ಹೆಚ್ಚು ಪರಿಣಾಮಕಾರಿ; ಭಾರತೀಯ ಅಮೆರಿಕನ್ ಸಂಶೋಧನೆ
ದೇಶದಲ್ಲಿ ಸದ್ಯಕ್ಕೆ ಸಾವಿನ ಪ್ರಮಾಣ ಶೇ 1.19 ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು ಶೇಕಡಾ 8.40 ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇಕಡಾ 4.94 ಇದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ದರ 98.68 ಪ್ರತಿಶತದಷ್ಟು ದಾಖಲಾಗಿದೆ. ಇದುವರೆಗೂ ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 4,42,35,772 ಕ್ಕೆ ತಲುಪಿದೆ. ಕೇಂದ್ರ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದ ಅಡಿ ಇದುವರೆಗೆ ದೇಶದಲ್ಲಿ 220.66 ಕೋಟಿ ಕೋವಿಡ್ ಲಸಿಕಾ ಡೋಸ್ ನೀಡಲಾಗಿದೆ.
ಇದನ್ನೂ ಓದಿ :ಕೋವಿಡ್ ಸಾವಿನ ಅಪಾಯ ಕಡಿಮೆ ಮಾಡುತ್ತೆ ಫಿಜರ್ ಬೈವೆಲೆಂಟ್ ಲಸಿಕೆ- ಅಧ್ಯಯನ ವರದಿ
ಟಿ ಸೆಲ್ ಆಧಾರಿತ ಲಸಿಕೆ ಉತ್ತಮ : ಕೋವಿಡ್ ಲಸಿಕೆ ಪಡೆದಿದ್ದರೂ ಹಲವು ಬಾರಿ ಕೊರೊನಾ ರೂಪಾಂತರ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆ ವೈರಸ್ ಎದುರಿಸಲು ರೋಗ ನಿರೋಧಕ ಶಕ್ತಿ ಜೊತೆಗೆ ಪ್ರತಿಕಾಯದ ಅವಶ್ಯಕತೆ ಇದೆ. ಹೀಗಾಗಿ, ಕೋವಿಡ್ಗೆ ಟಿ ಸೆಲ್ ಆಧಾರಿತ ಲಸಿಕೆ ಉತ್ತಮ ಪರಿಹಾರ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಟಿ ಸೆಲ್ ಆಧಾರಿತ ಕೋವಿಡ್ ಲಸಿಕೆಗಳು ಪ್ರಸ್ತುತ ಲಸಿಕೆಗಳಿಂದ ಹೆಚ್ಚು ಕಾಲ ಉಳಿಯುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಕೋವಿಡ್ ಲಸಿಕೆಗಳನ್ನು ಸಾರ್ಸ್ ಕೋವ್ - 2 ಸ್ಪೈಕ್ ಪ್ರೊಟೀನ್ ವಿರುದ್ಧದ ರೋಗ ನಿರೋಧಕ ಶಕ್ತಿಯಾಗಿ ಬಳಕೆ ಮಾಡಲಾಗುತ್ತಿದೆ. ಈ ಸಾರ್ಸ್ - ಕೋವ್ 2 ಹೆಚ್ಚು ರೂಪಾಂತರಿಯಾಗಿದ್ದು, ಒಂದು ಅವಧಿ ಮುಗಿದ ಬಳಿಕ ಲಸಿಕೆ ಪರಿಣಾಮ ಕಡಿಮೆಯಾಗಿತ್ತದೆ ಎಂದು ಭಾರತೀಯ ಅಮೆರಿಕನ್ ಸಂಶೋಧಕರು ತಿಳಿಸಿದ್ದಾರೆ.
ಇದನ್ನೂ ಓದಿ :ರೆಮ್ಡಿಸಿವರ್, ಫಾವಿಪಿರಾವಿರ್ ಔಷಧ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್