ನವದೆಹಲಿ:ಕಳೆದ ವರ್ಷ ಲಾಕ್‌ಡೌನ್ ಜಾರಿಯಾದಾಗ ತವರಿಗೆ ಮರಳಲು ಪರದಾಡಿದ್ದ ವಲಸೆ ಕಾರ್ಮಿಕರು, ದೆಹಲಿಯಲ್ಲಿ 6 ದಿನಗಳ ಲಾಕ್‌ಡೌನ್ ಘೋಷಣೆ ಆಗುತ್ತಿದ್ದಂತೆಯೇ ನಿನ್ನೆ ಸಂಜೆಯಿಂದ ರಾಷ್ಟ್ರ ರಾಜಧಾನಿ ತೊರೆಯಲು ಆರಂಭಿಸಿದ್ದಾರೆ.
ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ತಡೆಯಲು ನಿನ್ನೆ (ಏ.19) ರಾತ್ರಿ 10 ಗಂಟೆಯಿಂದ ಏ. 26ರ ಬೆಳಗ್ಗೆ 6 ಗಂಟೆಯವರೆಗೆ ಲಾಕ್‌ಡೌನ್ ಜಾರಿ ಮಾಡಿ ಆದೇಶ ಹೊರಡಿಸಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದೊಂದು ಸಣ್ಣ ಲಾಕ್‌ಡೌನ್. ದೆಹಲಿ ಬಿಟ್ಟು ಹೊರಹೋಗಬೇಡಿ, ಸರ್ಕಾರ ನಿಮ್ಮನ್ನು ನೋಡಿಕೊಳ್ಳುತ್ತದೆ ಎಂದು ವಲಸೆ ಕಾರ್ಮಿಕರಲ್ಲಿ ಮನವಿ ಮಾಡಿದ್ದರು.
ಬಸ್ಗಾಗಿ ಕಾಯುತ್ತಿರುವ ವಲಸೆ ಕಾರ್ಮಿಕರು ಆದರೂ ಪುಟ್ಟ ಮಕ್ಕಳೊಂದಿಗೆ ತಲೆ, ಭುಜದ ಮೇಲೆ ಗಂಟುಮೂಟೆಯನ್ನು ಹೊತ್ತು ತಮ್ಮೂರಿಗೆ ಮರಳಲು ಬಸ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾವಿರಾರು ಮಂದಿ ವಲಸೆ ಕಾರ್ಮಿಕರು ಜಮಾಯಿಸಿದ್ದರು. ಸಾಮಾಜಿಕ ಅಂತರ, ಮಾಸ್ಕ್ಗಳು ಇಲ್ಲದೇ ಗಂಟೆಗಟ್ಟಲೆ ನಿಲ್ದಾಣಗಳಲ್ಲಿ ಅವರೆಲ್ಲಾ ಕಾದಿದ್ದಾರೆ.
10 ಪಟ್ಟು ಹೆಚ್ಚು ಟಿಕೆಟ್ ಶುಲ್ಕ
ಮೊದಲೇ ಮುಂದೇನು? ಎಂಬ ಚಿಂತೆಯಲ್ಲಿ ಬಂದ ವಲಸಿಗರಿಗೆ ಆನಂದ್ ವಿಹಾರ್ ಬಸ್ ಟರ್ಮಿನಲ್‌ನಲ್ಲಿ ಆಘಾತ ಎದುರಾಗಿತ್ತು. ಏಕೆಂದರೆ, ಟಿಕೆಟ್ ಶುಲ್ಕವನ್ನು ಒಂದಲ್ಲ, ಎರಡಲ್ಲ ಬರೋಬ್ಬರಿ 10 ಪಟ್ಟು ಹೆಚ್ಚಿಸಲಾಗಿತ್ತು. ಈ ಬೆಳವಣಿಗೆಯಿಂದ ಕಂಗಾಲಾದ ಕಾರ್ಮಿಕರ ಆಕ್ರೋಶದ ಕಟ್ಟೆ ಒಡೆಯಿತು. "ನಾವು ದಿನಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವವರು, ಲಾಕ್‌ಡೌನ್ ಘೋಷಿಸುವ ಮೊದಲು ಮುಖ್ಯಮಂತ್ರಿ ನಮಗೆ ಸ್ವಲ್ಪ ಸಮಯ ನೀಡಬೇಕಿತ್ತು. ಊರು ತಲುಪಲು ನಮಗೆ 200 ರೂ. ಬೇಕು, ಆದರೆ ಅವರು ಈಗ 3,000 ದಿಂದ 4,000 ರೂ.ಗಳನ್ನು ಕೇಳುತ್ತಿದ್ದಾರೆ, ನಾವು ಮನೆಗೆ ಹೋಗುವುದಾದರೂ ಹೇಗೆ" ಎಂದು ವಲಸೆ ಕಾರ್ಮಿಕರೊಬ್ಬರು ತಮ್ಮ ಅಳಲು ತೋಡಿಕೊಂಡರು.
ಇದನ್ನೂ ಓದಿ:ಅಕ್ಕಿ-ಬೇಳೆ ಚಿಂತೆ ಇಲ್ಲ.. ಲಾಕ್‌ಡೌನ್ ಘೋಷಣೆ ಆಗ್ತಿದ್ದಂತೆ ಮದ್ಯದಂಗಡಿಗಳ ಮುಂದೆ ಜನರ ಕ್ಯೂ!
'ಯಾವುದೇ ಭೂಮಾಲೀಕರು, ಸರ್ಕಾರ ಸಹಾಯ ಮಾಡಲ್ಲ'
"ನಮಗೆ ಈಗ ಯಾವುದೇ ಕೆಲಸವಿಲ್ಲ. ಲಾಕ್‌ಡೌನ್ ಸಮಯದಲ್ಲಿ ಯಾವುದೇ ಭೂಮಾಲೀಕರಾಗಲಿ, ಸರ್ಕಾರವಾಗಲಿ ನಮಗೆ ಸಹಾಯ ಮಾಡುವುದಿಲ್ಲ. ಅದಕ್ಕಾಗಿಯೇ ನಾವು ಹೊರಡುತ್ತಿದ್ದೇವೆ. ಇನ್ನು ಲಾಕ್‌ಡೌನ್ ವಿಸ್ತರಣೆಯಾದರೆ, ನಾವು ಬದುಕಲು ಸಾಧ್ಯವಾಗುವುದಿಲ್ಲ" ಎಂದು ಗಾಜಿಯಾಬಾದ್ ಗಡಿಯಲ್ಲಿ ವಲಸಿಗರೊಬ್ಬರು ಹೇಳಿದರು.
ಬಸ್ ಮೇಲೇರಿ ಕುಳಿತಿರುವ ವಲಸೆ ಕಾರ್ಮಿಕರು "ಮತ್ತೆ ಲಾಕ್‌ಡೌನ್ ಜಾರಿಯಾಗಿದೆ. ಕಳೆದ ವರ್ಷ ಅನೇಕರು ಕಾಲ್ನಡಿಗೆ ಮೂಲಕವೇ ಊರು ತಲುಪಿದ್ದರು. ಈ ಬಾರಿ ಕೂಡ ಅದೇ ಪರಿಸ್ಥಿತಿ ಬರುವಂತೆ ಕಾಣುತ್ತಿದೆ. ಇಲ್ಲೇ ಉಳಿದುಕೊಂಡರೆ ನಮಗೆ ಊಟ-ನೀರು ಸಿಗುವಂತೆ ಕಾಣುತ್ತಿಲ್ಲ. ಎಲ್ಲಾ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಮೇಲೆ ನಾನಿಲ್ಲಿಗೆ ಹಿಂದಿರುಗುತ್ತೇನೆ" ಎಂದು ಉತ್ತರ ಪ್ರದೇಶದ ಕಾನ್ಪುರ ಮೂಲದ ವಲಸೆ ಕಾರ್ಮಿಕರೊಬ್ಬರು ಹೇಳುತ್ತಾರೆ.