ನವದೆಹಲಿ :ಕೋವಿಡ್ ರೂಪಾಂತರಗಳಾದ ಡೆಲ್ಟಾ, ಬೀಟಾಗೆ ಕೋವಾಕ್ಸಿನ್ ಪರಿಣಾಮಕಾರಿ ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ ಬಿಬಿವಿ 152 (Bharat Biotech Vaccine-152) ಲಸಿಕೆ ಎರಡೂ ರೂಪಾಂತರಗಳ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ಹೇಳಿದೆ.
ಐಸಿಎಂಆರ್ ನಡೆಸಿದ ಈ ಅಧ್ಯಯನದಲ್ಲಿ ಡೆಲ್ಟಾ-ಬೀಟಾ ವಿರುದ್ಧ ಕೋವಾಕ್ಸಿನ್ ಪರಿಣಾಮಕಾರಿಯಾಗಿದೆ ಎಂದು ಹೇಳಿದೆ. ಈ ಲಸಿಕೆಯು ಕೋವಿಡ್ನಿಂದ ಚೇತರಿಸಿಕೊಂಡವರಲ್ಲಿ ಸೆರಾ ತಟಸ್ಥಗೊಳಿಸಿ ಬೀಟಾ, ಡೆಲ್ಟಾ ರೂಪಾಂತರಗಳ ವಿರುದ್ಧ ಕೆಲಸ ಮಾಡುತ್ತದೆ ಎಂದು ಐಸಿಎಂಆರ್ ವಿಜ್ಞಾನಿಗಳು ತಿಳಿಸಿದ್ದಾರೆ.
ವ್ಯಾಕ್ಸಿನೇಷನ್ ತೀವ್ರಗೊಳಿಸಿದರೆ ಈ ರೂಪಾಂತರಗಳಿಂದ ಜನರನ್ನು ರಕ್ಷಿಸಬಹುದು. ಕೋವಾಕ್ಸಿನ್ ರೂಪಾಂತರ ವೈರಸ್ಗೆ ಪರಿಣಾಮಕಾರಿಯಾಗಿರುವುದರಿಂದ ಪ್ರಯೋಗದ ಹಂತದಲ್ಲಿದ್ದ ಎಂಆರ್ಎನ್ಎ-1273, 162 ಬಿ2, ಚಾಡಾಕ್ಸ್1, ಎನ್ವಿಎಕ್ಸ್- ಕೋವಿ 2373ನಂತಹ ಲಸಿಕೆಗಳಿಗೆ ಕೊಂಚ ಹಿನ್ನಡೆಯಾಗಿದೆ.
ಬಿ1, ಆಲ್ಫಾ, ಝೇಟಾ ಮತ್ತು ಕಪ್ಪಾ ವಿರುದ್ಧ ಬಿಬಿವಿ 152 ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೇವಲ ರೋಗದ ವಿರುದ್ಧ ಮಾತ್ರವಲ್ಲ, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಕ್ಕೂ ಈ ಲಸಿಕೆ ಸಹಕಾರಿಯಾಗಲಿದೆ ಎಂದು ತಿಳಿದು ಬಂದಿದೆ.
ಕೋವಿಡ್-19 ಲಸಿಕೆ ಪಡೆದವರಲ್ಲಿ ಹಾಗೂ ಕೋವಿಡ್ನಿಂದ ಚೇತರಿಸಿಕೊಂಡವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಡೆಲ್ಟಾ ರೂಪಾಂತರ ಬರುವ ಸಾಧ್ಯತೆ ಕಡಿಮೆಯಿದೆ ಎಂದು ಈ ಹಿಂದೆ ಐಸಿಎಂಆರ್ ತಿಳಿಸಿತ್ತು.