ನವದೆಹಲಿ:ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ದ ವಿಶೇಷಚೇತನ ನೌಕರರೊಬ್ಬರು ಸುದೀರ್ಘ ಹೋರಾಟ ಮಾಡಿ ತಮ್ಮ ಸೇವಾ ಪ್ರಯೋಜನಗಳನ್ನು ಪಡೆಯವಲ್ಲಿ ಸಫಲರಾಗಿದ್ದಾರೆ. 2006ರಿಂದ ಅವರು ಬಯಸುತ್ತಿರುವ ಸೇವಾ ಪ್ರಯೋಜನವನ್ನು ಪಡೆಯಲು ದೇಶದ ಸರ್ವೋಚ್ಛ ನ್ಯಾಯಾಲಯ ಪರಿಹಾರ ನೀಡಿದೆ.
ಆರ್‌ಬಿಐ ನೌಕರರಾದ ಎ.ಕೆ. ನಾಯರ್ ಎಂಬುವರು ಶೇ.50ರಷ್ಟು ಅಂಗವೈಕಲ್ಯದೊಂದಿಗೆ ಪೋಲಿಯೊ ನಂತರದ ಅಂಗಾಂಗಗಳ ಪಾರ್ಶ್ವವಾಯುದಿಂದ ಬಳುತ್ತಿದ್ದಾರೆ. ಒಂದೆರಡು ವರ್ಷಗಳಲ್ಲಿ ನಿವೃತ್ತರಾಗುತ್ತಿರುವ ನಾಯರ್, ಆರ್‌ಬಿಐನಲ್ಲಿ ಸಹಾಯಕ ವ್ಯವಸ್ಥಾಪಕರ ಹುದ್ದೆಗೆ ಬಡ್ತಿ ಪಡೆಯಲು ಸುಮಾರು ಎರಡು ದಶಕಗಳ ಕಾಲ ಕಠಿಣ ಹೋರಾಟ ನಡೆಸಿದ್ದಾರೆ.
ನಾಯರ್ ಬಡ್ತಿಗೆ ಅರ್ಹತೆ ಪಡೆಯಲು ಮೂರು ಅಂಕಗಳ ಕೊರತೆಯನ್ನು ಹೊಂದಿದ್ದರು. ಇತ್ತೀಚೆಗೆ ಸುಪ್ರೀಂಕೋರ್ಟ್, ಸಂವಿಧಾನದ 142ನೇ ವಿಧಿ ಅಡಿ ನಾಯರ್ ಅವರಿಗೆ ಬಡ್ತಿಯಲ್ಲಿ ಮೀಸಲಾತಿಯ ಪ್ರಯೋಜನವನ್ನು ವಿಸ್ತರಿಸಲು ಆರ್‌ಬಿಐಗೆ ನಿರ್ದೇಶಿಸಿದೆ. ಸಾಮಾಜಿಕ ನ್ಯಾಯವನ್ನು ಭದ್ರಪಡಿಸುವ ಸವಾಲನ್ನು ಎದುರಿಸಲು ದುರ್ಬಲ ವರ್ಗವು ಬಲಿಷ್ಠ ವರ್ಗದೊಂದಿಗೆ ಹೋರಾಟದಲ್ಲಿ ತೊಡಗಿರುವಾಗ ಮತ್ತು ಮಾನದಂಡಗಳು ಸಮನಾಗಿರುವಾಗ ನ್ಯಾಯವನ್ನು ಖಾತ್ರಿಪಡಿಸಲು ಕಾನೂನಿನ ನ್ಯಾಯಾಲಯಗಳು ದುರ್ಬಲ ವರ್ಗ ಪರವಾಗಿ ಒಲವು ತೋರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಏನಿದು ಪ್ರಕರಣ?: ಎ.ಕೆ. ನಾಯರ್ ಅವರು 1990ರ ಸೆಪ್ಟೆಂಬರ್ 27ರಂದು ಕಾಯಿನ್/ನೋಟ್ ಎಕ್ಸಾಮಿನರ್, ಗ್ರೇಡ್-II/ಗುಮಾಸ್ತರಾಗಿ ವಿಶೇಷಚೇತನರಿಗೆ ಕಾಯ್ದಿರಿಸಿದ ಖಾಲಿ ಹುದ್ದೆಗೆ ಭರ್ತಿಯಾಗಿವ ಮೂಲಕ ಆರ್‌ಬಿಐ ಸೇವೆಗೆ ಸೇರಿದ್ದರು. 2003ರ ಪ್ಯಾನಲ್ ವರ್ಷಕ್ಕಾಗಿ ಆಲ್ ಇಂಡಿಯಾ ಮೆರಿಟ್ ಪರೀಕ್ಷೆಯಲ್ಲಿ ಅವರು ಭಾಗವಹಿಸಿದ್ದರು. ಈ ಪರೀಕ್ಷೆಯನ್ನು 2004ರ ಏಪ್ರಿಲ್ 26 ಮತ್ತು ಜುಲೈ 3ರ ನಡುವೆ ಆರ್‌ಬಿಐ ನಡೆಸಿತ್ತು. ವರ್ಗ-I ಹುದ್ದೆಗೆ ತನ್ನ ಬಡ್ತಿಯನ್ನು ಪಡೆದುಕೊಳ್ಳಲು ಹಾಗೂ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ನಿಗದಿಪಡಿಸಿದ ಮಾನದಂಡಗಳು ಸಾಮಾನ್ಯ ಅಭ್ಯರ್ಥಿಗಳಿಗೆ ಮತ್ತು ವಿಶೇಷಚೇತನರಿಗೆ ಒಂದೇ ಆಗಿದ್ದವು.