ವಾರಾಣಸಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ವಿವಾದಕ್ಕೆ ಶುಕ್ರವಾರ ವಾರಾಣಸಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ವಜು ಸ್ಥಳ ಹೊರತುಪಡಿಸಿ ಶೃಂಗಾರ ಗೌರಿ ಆವರಣದ ಸಂಪೂರ್ಣ ಪ್ರದೇಶದ ವೈಜ್ಞಾನಿಕ ಸಮೀಕ್ಷೆಗೆ ನ್ಯಾಯಾಲಯ ಆದೇಶಿಸಿದೆ. ಭಾರತೀಯ ಪುರಾತತ್ವ ಇಲಾಖೆಯು ತನ್ನ ವರದಿಯನ್ನು ಆಗಸ್ಟ್ 4ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಕೋರ್ಟ್ ಸೂಚನೆ ನೀಡಿದೆ.
ಜ್ಞಾನವಾಪಿ ಮಸೀದಿ ಪ್ರಕರಣವು ಸಾಕಷ್ಟು ಚರ್ಚೆಯ ವಿಷಯವಾಗಿದೆ. ಹಿಂದೂ ದೇವಾಲಯದ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ವೈಜ್ಞಾನಿಕ ಸಮೀಕ್ಷೆ ನಡೆಸಬೇಕೆಂದು ಕೋರಿ ಹಿಂದೂ ಭಕ್ತರ ಗುಂಪಿನ ಅರ್ಜಿಯನ್ನು ನ್ಯಾಯಾಲಯು ಪುರಸ್ಕರಿಸಿದೆ. ಆದರೆ, ಹಿಂದೂ ಅರ್ಜಿದಾರರು ಶಿವಲಿಂಗ ಎಂದು ಹೇಳುವ ರಚನೆಯು ಅಥವಾ ವಜುಖಾನಾ ಸಮೀಕ್ಷೆಯ ಭಾಗವಾಗಿರುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.
ಈ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನಡೆಸಲಿದೆ. ಈ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಆಗಸ್ಟ್ 4ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಎಎಸ್‌ಐಗೆ ಸೂಚಿಸಲಾಗಿದೆ. ಜೊತೆಗೆ ಸಮೀಕ್ಷೆಯ ಪ್ರಕ್ರಿಯೆ ಸಂದರ್ಭದಲ್ಲಿ ಮಸೀದಿಯೊಳಗೆ ಮುಸ್ಲಿಂ ಆರಾಧಕರು ಮಾಡುವ ನಮಾಜ್ ಹಾಗೂ ಪ್ರಾರ್ಥನೆಗಳಿಗೆ ಅಡ್ಡಿಯಾಗದಂತೆಯೂ ನ್ಯಾಯಾಲಯ ನಿರ್ದೇಶನ ನೀಡಿದೆ. ಅಲ್ಲದೇ, ಮಸೀದಿಯ ಆಸ್ತಿಗೆ ಯಾವುದೇ ಹಾನಿ ಮಾಡದಂತೆ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.