ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಪ್ರಧಾನಮಂತ್ರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಯಂತೆ ವರ್ತಿಸಿದ್ದ ಹಾಗೂ ಕಾಶ್ಮೀರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಿರಿಯ ಅಧಿಕಾರಿಗೆ ಸಿಗುವ ರಾಜ್ಯದ ಪ್ರೊಟೋಕಾಲ್ ಹಾಗೂ ಭದ್ರತೆಯನ್ನು ಅನುಭವಿಸಿದ ಗುಜರಾತ್‌ನ ವಂಚಕನೊಬ್ಬನಿಗೆ ಜಮ್ಮು ಹಾಗೂ ಕಾಶ್ಮೀರದ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಧಾನ ಮಂತ್ರಿ ಕಚೇರಿಯಲ್ಲಿ ತಂತ್ರ ಮತ್ತು ಪ್ರಚಾರ ವಿಭಾಗದ ಹೆಚ್ಚವರಿ ನಿರ್ದೇಶಕನಾಗಿ ಪೋಸ್ ನೀಡಿದ್ದ ಗುಜರಾತ್ ನಿವಾಸಿಯಾಗಿರುವ ಕಿರಣ್ ಪಟೇಲ್ ಎಂಬಾತನನ್ನು ಮಾರ್ಚ್ 3 ರಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದರು. ಬಂಧನದಲ್ಲಿದ್ದ ಕಿರಣ್ ಪಟೇಲ್ನನ್ನು ಇಂದು ಶ್ರೀನಗರದ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿ ಆದೇಶ ಹೊರಡಿಸಿದರು ಎಂದು ಕಿರಣ್ ಪಟೇಲ್ ಪರ ವಕೀಲ್ ರಯ್ಯನ್ ಅಹ್ಮದ್ ತಿಳಿಸಿದ್ದಾರೆ.
ವಂಚಕ ಕಿರಣ್ ಪಟೇಲ್ ಜಮ್ಮು ಮತ್ತು ಕಾಶ್ಮೀರದ ಪಂಚತಾರಾ ಹೋಟೆಲ್ನಿಂದ ಬಂಧಿಸಲಾಗಿತ್ತು. ಆತನ ವಿರುದ್ಧ ಫೋರ್ಜರಿ ಹಾಗೂ ವಂಚನೆ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿತ ಅನೇಕ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗಿದೆ. ಪ್ರಕರಣ ತನಿಖೆ ಹಂತದಲ್ಲಿದೆ. ತನಿಖೆ ಪೂರ್ಣಗೊಂಡ ನಂತರ ಈ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.