ನವದೆಹಲಿ:ದೆಹಲಿಯಲ್ಲಿ ನಡೆದಿದ್ದ ಶ್ರದ್ಧಾ ವಾಕರ್ ಎಂಬ ಯುವತಿಯ ಭೀಕರ ಕೊಲೆ ಪ್ರಕರಣದ ಚಾರ್ಜ್ಶೀಟ್ನಲ್ಲಿನ ವಿಷಯಗಳು ಮತ್ತು ಡಿಜಿಟಲ್ ಸಾಕ್ಷ್ಯ ದಾಖಲೆಗಳನ್ನು ಯಾವುದೇ ಮಾಧ್ಯಮಗಳಲ್ಲಿ ಪ್ರಕಟಿಸದಂತೆ ಇಲ್ಲಿನ ಸಾಕೇತ್ ನ್ಯಾಯಾಲಯವು ಇಂದು ನಿರ್ಬಂಧ ವಿಧಿಸಿದೆ. ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನಿಗೆ ನಡೆಸಲಾಗಿದ್ದ ನಾರ್ಕೋ ಪರೀಕ್ಷೆ, ಆಡಿಯೋ, ವಿಡಿಯೋ ಸಾಕ್ಷ್ಯಗಳು ಮಾಧ್ಯಮ ಸಂಸ್ಥೆಯೊಂದಕ್ಕೆ ಸಿಕ್ಕಿದ್ದು, ಪ್ರಸಾರ ಮಾಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೋರ್ಟ್ ಈ ಆದೇಶ ಹೊರಡಿಸಿದೆ.
ಪ್ರಕರಣದ ಪ್ರಮುಖ ಸಾಕ್ಷ್ಯಗಳ ಬಗೆಗಿನ ಮಾಹಿತಿ ಮಾಧ್ಯಮವೊಂದಕ್ಕೆ ಲಭ್ಯವಾಗಿದೆ. ಮಾಧ್ಯಮ ಇದನ್ನು ಪ್ರಸಾರ ಮಾಡುವ ಸಾಧ್ಯತೆ ಇದೆ. ತನಿಖೆಯ ಹಂತದಲ್ಲಿ ಸಾಕ್ಷ್ಯಗಳ ಬಗ್ಗೆ ಮಾಹಿತಿ ಭಿತ್ತರವಾಗುವುದರಿಂದ ತನಿಖೆಯ ದಾರಿ ತಪ್ಪಲಿದೆ. ಹೀಗಾಗಿ ಪ್ರಕಟಣೆ ಮತ್ತು ಪ್ರಸಾರಕ್ಕೆ ಅನುವು ಮಾಡಿಕೊಡಬಾರದು ಎಂದು ದೆಹಲಿ ಪೊಲೀಸರು ಕೋರ್ಟ್ ಮೊರೆ ಹೋಗಿದ್ದರು. ಮನವಿ ಆಲಿಸಿದ ಕೋರ್ಟ್ ನಿರ್ಬಂಧ ಹೇರಿದೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಈ ಬಗ್ಗೆ ಮಾಹಿತಿ ನೀಡಿದ್ದು, ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ಪ್ರಕರಣದ ಡಿಜಿಟಲ್ ಸಾಕ್ಷ್ಯ ಸೇರಿದಂತೆ ಚಾರ್ಜ್ ಶೀಟ್‌ನ ವಿಷಯವನ್ನು ಪ್ರಕಟಿಸದಂತೆ ಮತ್ತು ಪ್ರಸಾರ ಮಾಡದಂತೆ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ದಾಖಲೆಗಳಲ್ಲ:ಪ್ರಕರಣದಲ್ಲಿನ ದಾಖಲೆಗಳು ಸಾರ್ವಜನಿಕವಾಗಿ ಭಿತ್ತರಿಸುವಂತಹ ವಿಷಯಗಳಲ್ಲ. ಚಾರ್ಜ್‌ಶೀಟ್‌ಗೆ ಸಂಬಂಧಿಸಿದ ಯಾವುದೇ ಆಡಿಯೋ, ವಿಡಿಯೋ ಇತರೆ ಸಾಕ್ಷ್ಯಾಧಾರಗಳ ಮಾಹಿತಿಯನ್ನು ಪ್ರಸಾರ ಮಾಡುವುದು ತನಿಖೆಗೆ ಅಡ್ಡಿಯಾಗಲಿದೆ. ಕೆಲವು ಮಾಧ್ಯಮಗಳು ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಸೂಕ್ಷ್ಮ ಸಾಕ್ಷ್ಯಗಳ ಸಮೇತ ವರದಿ ಮಾಡುತ್ತಿವೆ. ಇದು ಸೂಕ್ಷ್ಮ ವಿಷಯದಲ್ಲಿ ಆರೋಪಿ ಮತ್ತು ತನಿಖಾಧಿಕಾರಿಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಈ ವಿಷಯ ಇನ್ನೂ ನ್ಯಾಯಾಲಯದ ಮುಂದೆ ಬಾಕಿ ಇದೆ. ಅದಕ್ಕಾಗಿ ನ್ಯಾಯಾಲಯವು ಚಾರ್ಜ್ಶೀಟ್ನಲ್ಲಿ ಲಗತ್ತಿಸಲಾದ ವಿಷಯಗಳನ್ನು ಪ್ರಸಾರ ಮತ್ತು ಪ್ರಕಟಣೆಯನ್ನು ಮಾಡುವಂತಿಲ್ಲ ಎಂದಿದೆ.