ಲಖನೌ(ಉತ್ತರ ಪ್ರದೇಶ):ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ನಿಗೂಢ ಸಾವು ಪ್ರಕರಣದ ವರದಿಯನ್ನು ಲಕ್ನೋ ವಿಶೇಷ ಕೋರ್ಟ್ ತಿರಸ್ಕರಿಸಿದ್ದು, ಮರು ತನಿಖೆಗೆ ಆದೇಶ ನೀಡಿದೆ.
ಅನುರಾಗ್ ತಿವಾರಿ ನಿಗೂಢ ಸಾವಿನ ಕುರಿತು ಕೇಂದ್ರ ತನಿಖಾ ದಳ ತನಿಖೆ ನಡೆಸಿ, ಅದರ ವರದಿಯನ್ನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿತ್ತು. ಆದರೆ, ಈ ವರದಿಗೆ ಅನುರಾಗ್ ಅವರ ಸಹೋದರ ಮಯಾಂಕ್ ತಿವಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಅರ್ಜಿದಾರರ ಆದೇಶದ ಮೇರೆಗೆ ವಿಶೇಷ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಬಿಐ ನ್ಯಾಯಾಲಯ) ಈ ಆದೇಶ ಹೊರಹಾಕಿದೆ.
ಅಧಿಕಾರಿ ಅನುರಾಗ್ ತಿವಾರಿ ತಮ್ಮ ಜನ್ಮದಿನ ಮೇ 17, 2017 ರಂದೇ ಹಜರತ್‌ಗಂಜ್‌ನ ಮೀರಾ ಬಾಯಿ ಮಾರ್ಗದಲ್ಲಿರುವ ಅತಿಥಿ ಗೃಹದ ಬಳಿ ನಿಗೂಢವಾಗಿ ಸಾವನ್ನಪ್ಪಿದ್ದರು. ಇವರು ಬೆಂಗಳೂರಿನಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತರಾಗಿದ್ದರು. ಅನುರಾಗ್ ಕುಟುಂಬಸ್ಥರ ದೂರಿನನ್ವಯ ಮರು ತಿನಿಖೆಗೆ ಕೋರ್ಟ್ ಆದೇಶ ನೀಡಿದ್ದು, ಅಕ್ಟೋಬರ್ 14ಕ್ಕೆ ಮುಂದಿನ ವಿಚಾರಣೆ ನಿಗದಿ ಮಾಡಿದೆ.
ಇದನ್ನೂ ಓದಿ:ಐಎಂಎ ಪ್ರಕರಣದ ಆರೋಪ ಹೊತ್ತ ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ!!
ಅನುರಾಗ್ ತಿವಾರಿ ಅನ್ನಭಾಗ್ಯ ಅಕ್ಕಿ ಹಗರಣದ ಬಗ್ಗೆ ತನಿಖೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ಸಜ್ಜಾಗಿದ್ದರು. ಇದರ ಬೆನ್ನಲ್ಲೇ ಅವರ ಮೃತದೇಹ ನಿಗೂಢವಾಗಿ ಪತ್ತೆಯಾಗಿತ್ತು. ಇದಕ್ಕೂ ಮೊದಲು ಕರ್ನಾಟಕ ಸರ್ಕಾರದಲ್ಲಿ ದಕ್ಷ ಐಎಎಸ್ ಅಧಿಕಾರಿಗಳಿಗೆ ಕೆಲಸ ಮಾಡಲು ಆಗುತ್ತಿಲ್ಲ. ನನಗೂ ಸಹ ಜೀವ ಭಯವಿದೆ. ಆದಷ್ಟು ಬೇಗ ಮರಳಿ ಉತ್ತರಪ್ರದೇಶಕ್ಕೆ ಬರುವುದಾಗಿ ಮೆಸೇಜ್ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಫೆಬ್ರವರಿ 2019 ಹಾಗೂ ಜನವರಿ 2021ರಲ್ಲಿ ಎರಡು ಸಲ ಪ್ರಕರಣದ ವರದಿ ಸಲ್ಲಿಕೆ ಮಾಡಿದೆ. ಆದರೆ, ಆ ವರದಿ ಸಹ ತಿರಸ್ಕೃತವಾಗಿತ್ತು.