ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಹೈಕೋರ್ಟ್ ನಿರ್ದೇಶನದ ಮೇರೆಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ತಾಯಿಗೆ ಶುಕ್ರವಾರ ಪಾಸ್‌ಪೋರ್ಟ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಅವರ ಪತ್ನಿ ಮತ್ತು ಮೆಹಬೂಬಾ ಮುಫ್ತಿ ಅವರ ತಾಯಿ ಗುಲ್ಶನ್ ನಜೀರ್ ಅವರು ಪಾಸ್‌ಪೋರ್ಟ್ ಕೊರತೆಯಿಂದಾಗಿ 2020 ರಲ್ಲಿ ಹಜ್ ಯಾತ್ರೆಗೆ ಹೋಗಲು ಸಾಧ್ಯವಾಗಿರಲಿಲ್ಲ.
ಕಳೆದ ಮೂರು ವರ್ಷಗಳಿಂದ ಗುಲ್ಶನ್ ನಜೀರ್ ಅವರ ಪಾಸ್‌ಪೋರ್ಟ್ ಅನ್ನು ಅಧಿಕಾರಿಗಳು ನವೀಕರಿಸಿರಲಿಲ್ಲ. ಪಾಸ್‌ಪೋರ್ಟ್‌ನ ಕೊರತೆಯಿಂದಾಗಿ 2020 ರಲ್ಲಿ ಗುಲ್ಶನ್ ಹಜ್ ಯಾತ್ರೆಗೆ ತೆರಳಲು ಸಾಧ್ಯವಾಗಲಿಲ್ಲ. ಪಾಸ್‌ಪೋರ್ಟ್‌ಗಳ ವಿತರಣೆಗೆ ಪ್ರಮುಖ ಭದ್ರತಾ ಕ್ಲಿಯರೆನ್ಸ್ ಅನ್ನು ಒದಗಿಸುವ ಪೊಲೀಸರ ಗುಪ್ತಚರ ವಿಭಾಗವು ಸಲ್ಲಿಸಿದ ಪ್ರತಿಕೂಲ ವರದಿಯ ಮೇರೆಗೆ 2021 ರಲ್ಲಿಯೂ ಪಾಸ್‌ಪೋರ್ಟ್ ಅನ್ನು ನವೀಕರಿಸಲಾಗಿರಲಿಲ್ಲ.
2021ರಲ್ಲಿ, ಗುಲ್ಶನ್ ನಜೀರ್ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಸಿಐಡಿ ಇಲಾಖೆಯು ಈ ಸಂಬಂಧ ಪ್ರತಿಕೂಲ ವರದಿ ಮಾಡಿದೆ ಎಂದು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ನ್ಯಾಯಾಲಯಕ್ಕೆ ತಿಳಿಸಿದ ನಂತರ, ಪಾಸ್‌ಪೋರ್ಟ್ ಕಾಯ್ದೆಯ ಸೆಕ್ಷನ್ 6(2)(ಸಿ) ಅಡಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಈ ಅರ್ಜಿ ತಿರಸ್ಕಾರವಾದ ನಂತರ ಪ್ರಭಾವಿ ರಾಜಕೀಯ ಕುಟುಂಬಕ್ಕೆ ಸೇರಿದ ಗುಲ್ಶನ್ ನಜೀರ್ ಅವರು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಮನವಿಗೆ ಪ್ರತಿಕ್ರಿಯಿಸಿದ ಹೈಕೋರ್ಟ್, 'ಪಾಸ್‌ಪೋರ್ಟ್ ಮರು ನೀಡುವುದನ್ನು ಪರಿಗಣಿಸಿ' ಎಂದು ಪಾಸ್‌ಪೋರ್ಟ್ ಅಧಿಕಾರಿಗೆ ಸೂಚಿಸಿದೆ. ಸಂಪೂರ್ಣ ಪ್ರಕರಣವನ್ನು ಹೊಸದಾಗಿ ಪರಿಗಣಿಸಿ ಆರು ವಾರಗಳಲ್ಲಿ ಆದೇಶ ಹೊರಡಿಸುವಂತೆ ಪಾಸ್‌ಪೋರ್ಟ್ ಅಧಿಕಾರಿಗೆ ನ್ಯಾಯಾಲಯ ಸೂಚಿಸಿತ್ತು.
"ವಯಸ್ಸಾಗಿರುವ ಅರ್ಜಿದಾರರು ಯಾವುದೇ ಪ್ರತಿಕೂಲ ಭದ್ರತೆಗೆ ಜವಾಬ್ದಾರರಾಗಿರುವುದಿಲ್ಲ" ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ಪಾಸ್‌ಪೋರ್ಟ್ ನೀಡುವಂತೆ ಆದೇಶಿಸಿದೆ. ವರದಿಯ ಅನುಪಸ್ಥಿತಿಯಲ್ಲಿ, ದೇಶದ ಸಂವಿಧಾನದ 21 ನೇ ಪರಿಚ್ಛೇದದ ಅಡಿ ಖಾತರಿಪಡಿಸುವ ಮೂಲ ಹಕ್ಕಿನಿಂದ ವಂಚಿತರಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್‌ನ ಆದೇಶದ ಮೇರೆಗೆ ಮೆಹಬೂಬ್ ಮುಫ್ತಿ ಅವರ ತಾಯಿಗೆ ಪಾಸ್‌ಪೋರ್ಟ್ ನೀಡಲಾಗಿದೆ.