ನವದೆಹಲಿ :ಲಿವಿಂಗ್ ಪಾರ್ಟ್ನರ್ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾ ವಿರುದ್ಧ ದೆಹಲಿಯ ಸಾಕೇತ್ ನ್ಯಾಯಾಲಯವು ಕೊಲೆ ಮತ್ತು ಸಾಕ್ಷ್ಯಾಧಾರ ನಾಶಪಡಿಸಿದ ಆರೋಪಗಳನ್ನು ಹೊರಿಸಿದೆ. ಈ ಸಂದರ್ಭದಲ್ಲಿ ಆರೋಪಿ ಪೂನಾವಾಲಾ ನಾನು ನಿರಪರಾಧಿ ಎಂದು ಹೇಳಿಕೊಂಡಿದ್ದು, ಪ್ರಕರಣವನ್ನು ಎದುರಿಸುವುದಾಗಿ ಹೇಳಿದ್ದಾನೆ. ಈ ಹಿನ್ನಲೆ ಪ್ರಕರಣ ಸಂಬಂಧ ಸಾಕ್ಷ್ಯಾಧಾರಗಳನ್ನು ದಾಖಲಿಸುವಂತೆ ಹೇಳಿದ ನ್ಯಾಯಾಲಯವು ಜೂನ್ 1ಕ್ಕೆ ವಿಚಾರಣೆಯನ್ನು ಮುಂದೂಡಿದೆ.
2022ರ ಮೇ 18ರಂದು ದೆಹಲಿಯ ಮೆಹ್ರೌಲಿಯ ಫ್ಲಾಟ್ನಲ್ಲಿ ಅಫ್ತಾಬ್ ಶ್ರದ್ಧಾಳನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದ. ಬಳಿಕ ಶ್ರದ್ಧಾಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ವಿವಿದೆಡೆ ಎಸೆದಿದ್ದ. ಬಳಿಕ ಶ್ರದ್ಧಾ ನಾಪತ್ತೆಯಾಗಿದ್ದ ಬಗ್ಗೆ ಪ್ರಕರಣ ದಾಖಲಾಗಿ, ಆರೋಪಿ ಅಫ್ತಾಬ್ನನ್ನು 2022ರ ನವೆಂಬರ್ ತಿಂಗಳಲ್ಲಿ ಪೊಲೀಸರು ಬಂಧಿಸಿದ್ದರು. ಈ ಸಂಬಂಧ ಆರೋಪಿ ಅಫ್ತಾಬ್ ಪೂನವಾಲ ವಿರುದ್ಧ ಐಪಿಸಿ ಸೆಕ್ಷನ್ 302 ( ಕೊಲೆ) ಮತ್ತು 201(ಸಾಕ್ಷ್ಯ ನಾಶ)ಅಡಿಯಲ್ಲಿ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಮನೀಶಾ ಖುರಾನ ಕಕ್ಕರ್ ಅವರು ಆರೋಪ ನಿಗದಿ ಮಾಡಿದ್ದಾರೆ.
ನ್ಯಾಯಾಲಯ ಮುಂದೆ ಸಲ್ಲಿಸಲಾದ ಸಾಂದರ್ಭಿಕ ಮತ್ತು ದೃಢೀಕರಿಸುವ ಸಾಕ್ಷ್ಯವನ್ನು ಗಮನಿಸಿದ ನ್ಯಾಯಾಧೀಶರು ಕೋರ್ಟ್ಗೆ ಸಲ್ಲಿಸಲಾದ ಸಾಕ್ಷಿಗಳು ವಸ್ತುನಿಷ್ಠವಾಗಿಲ್ಲ ಎಂಬ ಆರೋಪಿ ಪರ ವಕೀಲರ ವಾದವು ಸರಿಯಿಲ್ಲ ಎಂದು ಹೇಳಿದರು. ಆರೋಪಿ ಪರ ವಕೀಲ ಅಕ್ಷಯ್ ಭಂಡಾರಿ, ಅಫ್ತಾಬ್ ವಿರುದ್ಧ ಕೊಲೆ ಅಥವಾ ಸಾಕ್ಷ್ಯ ನಾಶ ಪಡಿಸಿದ ಪ್ರಕರಣವನ್ನು ಒಟ್ಟಿಗೆ ಸೇರಿಸಲಾಗುವುದಿಲ್ಲ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು 201 ರ ಅಡಿಯಲ್ಲಿ ಪ್ರಕರಣವನ್ನು ಹೊರಿಸಲಾಗುವುದಿಲ್ಲ ಎಂದು ವಾದಿಸಿದರು.