ನವದೆಹಲಿ : 2011 ರಲ್ಲಿ ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಆಗ್ರಾ ನ್ಯಾಯಾಲಯವು ಭಾರತೀಯ ಜನತಾ ಪಕ್ಷದ (ಬಿಜೆಪಿ) ಲೋಕಸಭಾ ಸದಸ್ಯ ರಾಮ ಶಂಕರ್ ಕಟೇರಿಯಾ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಆಗಸ್ಟ್ 5 ರಂದು ವಿಧಿಸಿತು. ಈ ಕುರಿತು ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಇಂದು ನ್ಯಾಯಾಧೀಶ ವಿವೇಕ ಸಂಗಲ್ ಅವರು ತೀರ್ಪು ಪ್ರಕಟಿಸಲಿದ್ದಾರೆ.
ಹೌದು, ಇಟಾವಾ ಬಿಜೆಪಿ ಸಂಸದ ಡಾ. ರಾಮ ಶಂಕರ್ ಕಟೇರಿಯಾ ಅವರಿಗೆ ಕಳೆದ ತಿಂಗಳು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದರ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧ ಸೆಪ್ಟೆಂಬರ್ 27, 2023 ರಂದು ಆಗ್ರಾದ ಜಿಲ್ಲಾ ನ್ಯಾಯಾಧೀಶರಾದ ವಿವೇಕ್ ಸಂಗಲ್ ಅವರು ನ್ಯಾಯಾಲಯದಲ್ಲಿ ಕಟೇರಿಯಾ ಪರವಾದ ವಕೀಲರ ವಾದವನ್ನು ಆಲಿಸಿದರು. ಸೆಪ್ಟೆಂಬರ್ 30 ರಂದು ಪ್ರಾಸಿಕ್ಯೂಷನ್ ವಾದಗಳನ್ನು ಪೂರ್ಣಗೊಳಿಸಲಾಯಿತು. ಉಭಯ ಪಕ್ಷಗಳ ವಾದ-ಪ್ರತಿವಾದಗಳು ಮುಗಿದ ನಂತರ ಅಕ್ಟೋಬರ್ 12 ರಂದು ನಿರ್ಧಾರ ಪ್ರಕಟಿಸುವುದಾಗಿ ಸೂಚಿಸಿದ್ದರು. ಇಂದು ಹೊರಬೀಳಲಿರುವ (ಗುರುವಾರ) ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದ ತೀರ್ಪಿನ ಮೇಲೆ ಡಾ.ರಾಮ ಶಂಕರ್ ಅವರ ಸದಸ್ಯತ್ವ ಅವಲಂಬಿತವಾಗಿದೆ.
ಪ್ರಕರಣ ವಿವರ: ಆಗಸ್ಟ್ 5, 2023 ರಂದು ಆಗ್ರಾದ ಸಂಸದ/ಶಾಸಕರ ನ್ಯಾಯಾಲಯವು 12 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿದಂತೆ ಬಿಜೆಪಿ ಸಂಸದ ಕಟೇರಿಯಾ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಐಪಿಸಿಯ ಸೆಕ್ಷನ್ 147 ಮತ್ತು 323 ರ (ಗಲಾಭೆ ಮತ್ತು ಉದ್ದೇಶಪೂರ್ವಕವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಬಿಜೆಪಿ ಸಂಸದರನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದಾದ ಬಳಿಕ ಎರಡು ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿದೆ. ಈ ಕುರಿತು ಬಿಜೆಪಿ ಸಂಸದ ಡಾ.ರಾಮಶಂಕರ್ ಅವರು 2023ರ ಆಗಸ್ಟ್ 7ರಂದು ಜಿಲ್ಲಾ ನ್ಯಾಯಾಲಯದಲ್ಲಿ ವಿಶೇಷ ಎಂಪಿ/ಎಂಎಲ್‌ಎ ನ್ಯಾಯಾಲಯದ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಬಿಜೆಪಿ ಸಂಸದರ ಮನವಿಯನ್ನು ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯ ಸ್ವೀಕರಿಸಿ,ಈ ಬಗ್ಗೆ ವಿಚಾರಣೆ ನಡೆಸಿದೆ. ಇದಾದ ಬಳಿಕ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯವು ಡಾ.ರಾಮ ಶಂಕರ್ ಕಟೇರಿಯಾ ಅವರಿಗೆ ದೊಡ್ಡ ರಿಲೀಫ್ ನೀಡಿದೆ. ಮೇಲ್ಮನವಿ ವಿಚಾರಣೆ ನಡೆಯುವವರೆಗೆ ಸಂಸದ/ಶಾಸಕ ನ್ಯಾಯಾಲಯದ ಶಿಕ್ಷೆಯನ್ನು ಅಮಾನತುಗೊಳಿಸಿ ವಿಶೇಷ ನ್ಯಾಯಾಧೀಶರು ಆದೇಶ ನೀಡಿದ್ದರು.
ಇನ್ನು ಕಟೇರಿಯಾ ಅವರು ನವೆಂಬರ್ 2014 ರಿಂದ ಜುಲೈ 2016 ರವರೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರ ವಿರುದ್ಧ 12 ಕ್ರಿಮಿನಲ್ ಆರೋಪಗಳಿವೆ. ಅವರು ಮೂರು ಬಾರಿ ಸಂಸದರಾಗಿದ್ದಲ್ಲದೆ, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ :ಈಗ ನಮ್ದೇ ಅಧಿಕಾರ.. ನಮ್ಮತ್ತ ಬೊಟ್ಟು ಮಾಡಿದ್ರೇ ಆ ಬೊಟ್ಟು ಕತ್ತರಿಸ್ತೀವಿ.. ಬಿಜೆಪಿ ಅಭ್ಯರ್ಥಿ ಧಮ್ಕಿ